ವರ್ಷಾಂತ್ಯಕ್ಕೆ ಪೀಣ್ಯಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಬೆಂಗಳೂರು, ಸೆ. ೨೧- ಬೆಂಗಳೂರಿನ ಗೊರಗುಂಟೆ ಪಾಳ್ಯದ ಮೇಲ್ಸೇತುವೆಯ ದುರಸ್ತಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮಂಜುನಾಥ್ ಅವರ ಪ್ರಶ್ನೆಗೆ ಸಚಿವ ಸಿ.ಸಿ. ಪಾಟೀಲ್ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗೊರಗುಂಟೆ ಪಾಳ್ಯ ಮೇಲ್ಸೇತುವೆಯಲ್ಲಿ ಆಗಿರುವ ತೊಂದೆರಗಳನ್ನು ಇತ್ತೀಚೆಗೆ ಕೇಂದ್ರದ ಹೆದ್ದಾರಿ ಸಚಿವ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ. ಮೇಲ್ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಹೇಳಿದ್ದೇನೆ. ಸಚಿವರು ಇದಕ್ಕೆ ಸ್ಪಂದಿಸಿದ್ದು, ಕೂಡಲೇ ಕಾಮಗಾರಿಯ ಅಂದಾಜನ್ನು ಕಳುಹಿಸಿಕೊಡಿ ಹಣ ಮಂಜೂರಾತಿ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಗ್ಗೆಯ ಈ ಬಗ್ಹೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರ ಆದಷ್ಟು ಬೇಗ ಅಂದಾಜನ್ನು ಕಳುಹಿಸಿ ಮೇಲ್ಸೇತುವೆಯನ್ನು ದುರಸ್ತಿಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದರು.
ಇದಕ್ಕೂ ಮೊದಲು ಉತ್ತರಿಸಿದ್ದ ಸಚಿವ ಸಿ.ಸಿ. ಪಾಟೀಲ್, ಮೇಲ್ಸೇತುವೆಯ ಒಂದು ಜಾಗದಲ್ಲಿ ಲೂಪ್‌ನಲ್ಲಿ ತೊಂದರೆ ಕಂಡು ಬಂದಿದ್ದರಿಂದ ಮೊದಲು ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ನಂತರ ತಾಂತ್ರಿಕ ವರದಿ ಮೇಲೆ ಲಘು ವಾಹನಕ್ಕೆ ಅವಕಾಶ ನೀಡಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬಗ್ಗೆ ಮುಂಬೈ ಮೂಲದ ಸಂಸ್ಥೆಯೊಂದರಿಂದ ವರದಿ ಪಡೆದಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಪ್ರಶ್ನೆ ಕೇಳಿದ್ದ ಜೆಡಿಎಸ್‌ನ ಮಂಜುನಾಥ್ ಅವರು, ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಟೋಲ್‌ನಿಂದಲೂ ತೊಂದರೆಯಾಗುತ್ತಿದೆ. ಹಾಗೆಯೇ ಅಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಜತೆಗೆ ಇತ್ತೀಚೆಗೆ ಮುಖ್ಯಮಂತ್ರಿಗಳು ಉದ್ಘಾಟಿಸಿದ ಐಕಿಯಾ ಮಳಿಗೆಯಿಂದಲೂ ವಾಹನ ದಟ್ಟಣೆಯಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಜತೆಗೆ ಅಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಅವರು ಸಹ ವಾಹನದ ದಟ್ಟಣೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸದನದಲ್ಲಿ ಹೇಳಿ ಅದನ್ನು ಸರಿಪಡಿಸುವ ಅಗತ್ಯವಿದೆ ಎಂದಿದ್ದರು.