ವರ್ಷದ ಬಳಿಕ ಮತ್ತೆ 57 ಗಂಟೆ ಹು-ಧಾ ಸ್ತಬ್ಧ

ಹುಬ್ಬಳ್ಳಿ ಏ 23 : ಕೊರೊನಾ ಅಟ್ಟಹಾಸ ಹತ್ತಿಕ್ಕಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ಕಠಿಣ ನಿಯಮ ಹೊರಡಿಸಿದ್ದು, ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆ ಬರೋಬ್ಬರಿ 57 ಗಂಟೆ ಕಠಿಣ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಹು-ಧಾ ಅವಳಿ ನಗರ ವರ್ಷದ ಬಳಿಕ ಮತ್ತೇ ಸಂಪೂರ್ಣ ಸ್ತಬ್ಧವಾಗಲಿದೆ.
ಕಠಿಣ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಅವಳಿ ನಗರದ ಜನನಿಬಿಡ ಪ್ರದೇಶದಲ್ಲಿನ ಬೃಹತ್ ಮಾಲ್ ಗಳು, ಥಿಯೇಟರ್, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ಅಂಗಡಿ-ಮುಂಗಟ್ಟುಗಳು ಸೇರಿದಂತೆ ಎಲ್ಲಾ ಸಂಪೂರ್ಣ ಬಂದ್ ಆಗಲಿದ್ದು, ವ್ಯಾಪಾರಸ್ಥರು ಮತ್ತೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.
ಅಗತ್ಯ ಸೌಲಭ್ಯಗಳು ಮಾತ್ರ ಇರಲಿದ್ದು, ಇಂದು ರಾತ್ರಿ 9 ಗಂಟೆಯಿಂದ ಯಾರು ಮನೆಯಿಂದ ಹೊರ ಬರದಂತೆ ಕಠಿಣಾತಿ ಕಠಿಣ ಕ್ರಮಗಳನ್ನು ಹೊರಡಿಸಿದ್ದು, ನಿಯಮ ಉಲ್ಲಂಘನೆ ಮಾಡಿ ಯಾರಾದರೂ ಮನೆ ಬಿಟ್ಟು ಹೊರಗೆ ಬಂದರೇ ಖಾಕಿ ಖಡಕ್ಕಾಗಿ ಬಿಸಿ ಮುಟ್ಟಿಸಲಿದೆ.
ವೀಕೆಂಡ್ ಕರ್ಫ್ಯೂ ನಲ್ಲಿ ಕೇವಲ ತುರ್ತುಪರಿಸ್ಥಿತಿ ಹಾಗೂ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದ್ದು, ನಾಳೆ ನಗರದಾದ್ಯಂತ ಬಿಗಿ ಪೆÇಲೀಸ್ ಬಂದೂ-ಬಸ್ತ್ ಇರಲಿದೆ.
ಕಠಿಣ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹು-ಧಾ ದಲ್ಲಿ ಬಾರ್ ಗಳ ಮುಂದೆ ಮದ್ಯ ಪ್ರೀಯರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಯಲ್ಲಿ ಮುಗಿ ಬಿದ್ದಿರುವ ದೃಶ್ಯ ಕಂಡು ಬಂದಿತು.
ಇಂದು ಭಾಗಶಃ ಬಂದ್
ಬುಧವಾರ ರಾತ್ರಿಯಿಂದ ಕಠಿಣ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಅವಳಿ ನಗರದ ಜನತೆ ರಾತ್ರಿ ಬಾರಿ ಬೆಂಬಲ ವ್ಯಕ್ತಪಡಿಸಿದ್ದು, ನಿನ್ನೆ ರಾತ್ರಿಯೂ ಕೂಡಾ ಅವಳಿ ನಗರ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂದಿತು. ನಿನ್ನೆ ಹಾಗೂ ಇಂದೂ ಕೂಡಾ ಭಾಗಶಃ ಹುಬ್ಬಳ್ಳಿ-ಧಾರವಾಡದ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು ಕಂಡು ಬಂದಿತು.
ನಗರದ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಕೊಪ್ಪಿಕರ್ ರೋಡ್, ದುರ್ಗದ್ ಬೈಲ್, ಹಳೇ ಹುಬ್ಬಳ್ಳಿ ಹಾಗೂ ಧಾರವಾಡದ ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಯಲ್ಲಿರುವ ಅಂಗಡಿ-ಮುಂಗಟ್ಟು, ಮಾಲ್ ಗಳು ಬಂದ್ ಆಗಿದ್ದು, ಗ್ರಾಹಕರು ನಿರಾಶೆಯಿಂದ ಮರಳಿ ಹೋಗುವ ದೃಶ್ಯಗಳು ಇಂದು ಸಹ ಸಹಜವಾಗಿತ್ತು.
ಮದುವೆ ಖುಷಿಯಲ್ಲಿದ್ದವರಿಗೆ ಶಾಕ್ :
ಸಾರ್ವಜನಿಕರು ಮದುವೆ ತಯಾರಿಗೆ ಸಂಬಂಧಿಸಿದಂತಹ ಚಿನ್ನಾಭರಣ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ಬ್ರೇಕ್ ಬಿದ್ದಿದ್ದು ಅದ್ದೂರಿ ಮದುವೆ ಸಿದ್ದತೆಯಲ್ಲಿ ತೊಡಗಿರುವವರಿಗೆ ಕೊರೊನಾ ಬಿಗ್ ಶಾಕ್ ನೀಡಿದೆ.
ಮಾಸ್ಕ್ ಮರೆತ ಮಂದಿ : ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮಾತ್ರ ಕ್ಯಾರೆ ಎನ್ನದೇ ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎನ್ನುವಷ್ಟರ ಮಟ್ಟಿಗೆ ಜನರ ಓಡಾಟ ಕೆಲವೆಡೆ ಕಂಡು ಬಂದಿತು.