ವರ್ಷದ ಕೊನೆಯ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿ

ಚಾಮರಾಜನಗರ, ಡಿ.07:- ನಗರದ ರೋಟರಿ ಸಂಸ್ಥೆಯ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವತಿಯಿಂದ ರೋಟರಿ ಭವನದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ ನಡೆಯುತ್ತಿರುವ ಕಣ್ಣಿನ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದ 2021ನೇ ವರ್ಷದ ಕೊನೆಯ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಕಣ್ಣಿನ ತಪಾಸಣಾ ಶಿಬಿರದಲ್ಲಿ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯಿಂದ ಆಗಮಿಸಿದ್ದ ತಜ್ಞ ವೈದ್ಯರ ತಂಡ 275 ಮಂದಿ ಕಣ್ಣಿನ ವಿವಿಧ ತೊಂದರೆಯುಳ್ಳವರನ್ನು ತಪಾಸಣೆ ಮಾಡಿ ಸಲಹೆ ಸೂಚನೆ ಮತ್ತು ಔಷಧಿಗಳನ್ನು ನೀಡಿದರು. ಕಣ್ಣಿನಲ್ಲಿ ಪೊರೆಯುಳ್ಳ 175 ಮಂದಿಗೆ ಶಸ್ತ್ರ ಚಿಕಿತ್ಸೆಗಾಗಿ ಬುಧವಾರ ಕೊಯಮಾತ್ತೂರಿಗೆ ಬರುವಂತೆ ತಿಳಿಸಲಾಯಿತು. ಇವರೆಲ್ಲರು ಅಂದು ಬಸ್ಸಿನಲ್ಲಿ ಅರವಿಂದ ಕಣ್ಣಾಸ್ಪತ್ರೆ ತೆರಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಾರನೇ ದಿನ ನಗರಕ್ಕೆ ಆಗಮಿಸಲಿದ್ದಾರೆ.
ಶಿಬಿರಕ್ಕೆ ಚಾಲನೆ ನೀಡಿದ ರೋಟರಿ ಅಧ್ಯಕ್ಷ ಎ. ಶ್ರೀನಿವಾಸ್ ಮಾತನಾಡಿ, ರೋಟರಿ ಸಂಸ್ಥೆಯು ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಬಹಳ ವರ್ಷಗಳಿಂದ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ. ಕೋವಿಡ್ ಕಾರಣದಿಂದ ಕೆಲವು ತಿಂಗಳು ಸ್ಥಗಿತಗೊಂಡಿತ್ತು. 2021ರ ಅಂತಿಮ ಡಿಸೆಂಬರ್ ತಿಂಗಳ ಶಿಬಿರ ಇದಾಗಿದೆ. ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ತಪಾಸಣೆ ಬರುತ್ತಿದ್ದು, ಶಿಬಿರುವ ಅತ್ಯಂತ ಉಪಯುಕ್ತವಾಗುತ್ತಿದೆ. ಜನರು ಸಹ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರವಿಂದ್ ಕಣ್ಣಾಸ್ಪತ್ರೆಯ ಸಂಯೋಜನಾಧಿಕಾರಿ ರಜನಿಕಾಂತ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜು, ಮಾಜಿ ಅಧ್ಯಕ್ಷ ಯೋಗರಾಜ್, ಶ್ರೀನಿವಾಸ್ ಎಸ್‍ಆರ್‍ಎಸ್, ಮಹೇಶ್, ಕಾಗಲವಾಡಿ ಚಂದ್ರು ಮೊದಲಾದದವರು ಇದ್ದರು.