ವರ್ಷದೊಳಗೆ ಸಕ್ಕರೆ ಕಾರ್ಖಾನೆ ಆರಂಭ- ಸಚಿವ ಶ್ರೀರಾಮುಲು

ಕಂಪ್ಲಿ, ನ.3- ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಜಾಗವು ರೈತರಿಗೆ ಸೇರಿದ್ದಾಗಿದ್ದು, ರೈತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ನಿರುದ್ಯೋಗ ನಿರ್ಮೂಲನೆ ಉದ್ದೇಶದ ಹಿನ್ನೆಲೆ ವರ್ಷದೊಳಗೆ ಸಕ್ಕರೆ ಕಾರ್ಖಾನೆ ಪುನರ್‍ಸ್ಥಾಪನೆ ಮಾಡಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಸಕ್ಕರೆ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿ ಕಾರ್ಖಾನೆ ಆವರಣದಲ್ಲಿ ನಡೆಯುತ್ತಿರುವ ಹಳೆಯ ಗೋದಾಮುಗಳ ದುರಸ್ತಿ ಕಾರ್ಯ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿರುಗುಪ್ಪ, ಹೊಸಪೇಟೆ ಹಾಗೂ ಮರಳಿಯಲ್ಲಿನ 3 ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡಿರುವ ಹಿನ್ನೆಲೆ ಕಂಪ್ಲಿ ಸಕ್ಕರೆ ಕಾರ್ಖಾನೆ ಪುನರ್‍ಸ್ಥಾಪನೆಗೆ ರೈತರ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ 300 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಪುನರ್‍ಸ್ಥಾಪನೆ ನಡೆಯಲಿದೆ. ಸಕ್ಕರೆ ಕಾರ್ಖಾನೆ ಜಾಗವನ್ನು ಸಕ್ಕರೆ ಕಾರ್ಖಾನೆಗಾಗಿಯೇ ಬಳಸಲಿದ್ದು, ಸರ್ವರೂ ನೂತನ ಕಾರ್ಖಾನೆ ಸ್ಥಾಪನೆಗೆ ಉತ್ತೇಜನ ನೀಡಬೇಕಿದೆ. ಇನ್ನು ಕಾರ್ಖಾನೆ ಸ್ಥಗಿತಗೊಂಡ ಹಿನ್ನೆಲೆ ಕಬ್ಬು ಬೆಳೆವ ರೈತರೆಲ್ಲ ಭತ್ತ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಮುಂದಿನ ಒಂದು ವರ್ಷದೊಳಗೇನೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಳ್ಳಲಿದ್ದು ಕಬ್ಬು ಬೆಳೆಯುತ್ತಿದ್ದ ರೈತರೆಲ್ಲ ಪುನಃ ಕಬ್ಬನ್ನೇ ಬೆಳೆಯುವಂತಾಗಲಿದ್ದು ತ್ವರಿತಗತಿಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ಬ್ರಹ್ಮಯ್ಯ, ವಿ.ವಿದ್ಯಾಧರ್, ಬಿ.ಸಿದ್ದಪ್ಪ, ವಿ.ಎಲ್.ಬಾಬು,ಕೊಡಿದಲ ರಾಜು, ಸಿ.ಆರ್.ಹನುಮಂತ, ಎನ್.ರಾಮಾಂಜನೇಯಲು, ಎನ್.ಚಂದ್ರಕಾಂತ್‍ರೆಡ್ಡಿ, ಕೆ.ಹರ್ಷಿತ್, ಲೋಹಿತ್, ರವಿಚಂದ್ರ ಸೇರಿದಂತೆ ಅನೇಕರಿದ್ದರು.