ವರ್ಷಕ್ಕೊಮ್ಮೆ ಹೃದ್ರೋಗ ತಪಾಸಣೆ ಮಾಡಿಸಿಕೊಳ್ಳಿ

ಮೈಸೂರು: ಏ.09:- ಆರೋಗ್ಯವಂತ ವ್ಯಕ್ತಿಯೂ ವರ್ಷಕ್ಕೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ಮೈಸೂರು ವಿಭಾಗದ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ಹೃದ್ರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯ ಕಾಳಜಿ ವಹಿಸುವುದು ಮುಖ್ಯ. ವರ್ಷಕ್ಕೆ ಒಮ್ಮೆಯಾದರೂ ಈ ರೀತಿ ಪರೀಕ್ಷೆ ಮಾಡಿಸಿಕೊಂಡು ವೈದ್ಯರಿಂದ ಸಲಹೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇತ್ತೀಚೆಗೆ ಹೃದ್ರೋಗ ಪ್ರಮಾಣ ಹೆಚ್ಚಾಗುತ್ತಿದೆ. ಭಾರತದಲ್ಲಿ ಮಧುಮೇಹ ಮತ್ತು ಹೃದ್ರೋಗ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಬದಲಾದ ಜೀವನ ಶೈಲಿಯೇ ಮುಖ್ಯ ಕಾರಣವಾಗಿದೆ. ಅದರಲ್ಲಿಯೂ 35 ರಿಂದ 40 ವರ್ಷದ ಯುವ ಸಮೂಹದವರಲ್ಲಿಯೇ ಕಾಯಿಲೆ ಹೆಚ್ಚಾಗಿ ಕಾಣಿಸುತ್ತಿದೆ. ಕಳೆದ ನಾಲ್ಕೈದು ವರ್ಷದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಸಾಕಷ್ಟು ಮಂದಿ ಆಸ್ಪತ್ರೆಗೆ ಬರುವ ವೇಳೆಗೆ ಸಾವಿಗೀಡಾಗುತ್ತಾರೆ.
ಒಂದು ನಿಮಿಷದಲ್ಲಿ ಎಲ್ಲವೂ ನಡೆದು ಹೋಗುತ್ತದೆ. ಈ ರೀತಿ ಹಠಾತ್ ಸಾವು ಹೆಚ್ಚಾಗಿದೆ. ಆರೋಗ್ಯವಂತ ಜೀವನ ನಡೆಸುವುದೇ ಇದಕ್ಕೆ ಪರಿಹಾರ ಎಂದು ಸಲಹೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಕೆಲಸದ ದಾವಂತದಲ್ಲಿ ಆರೋಗ್ಯ ಕಡೆಗಣಿಸುತ್ತಾರೆ. ಇದರಿಂದ ದೊಡ್ಡ ಪ್ರಮಾಣದ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಹೃದಯ ತಪಾಸಣೆ ಮಾಡಿಸುವುದು ಮುಖ್ಯವೆಂದು ಭಾವಿಸಿ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.
ಮೈಸೂರು ಹಾಗೂ ಸುತ್ತಲ ಜಿಲ್ಲೆಗಳ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಜಯದೇವ ಆಸ್ಪತ್ರೆ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಡಾ.ಸಿ.ಎನ್ ಮಂಜುನಾಥ್ ಅವರ ದೂರ ದೃಷ್ಟಿ ಹಾಗೂ ಸರಕಾರದ ಸಹಕಾರದಿಂದ ಈ ಆಸ್ಪತ್ರೆ ಆರಂಭವಾಗಿ ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿ ಕೆಲಸ ಮಾಡುತ್ತಿದೆ ಎಂದು ಸ್ಮರಿಸಿದರು.
ಶಿಬಿರದಲ್ಲಿ 160ಕ್ಲೂ ಹೆಚ್ಚು ಪತ್ರಕರ್ತರು ಮತ್ತವರ ಕುಟುಂಬದವರಿಗೆ ಬಿಪಿ, ಶುಗರ್, ರಕ್ತ ಪರೀಕ್ಷೆ, ಇಸಿಜಿ, ಎಕೋ ಹಾಗೂ ಅಗತ್ಯವಿದ್ದವರಿಗೆ ಟ್ರೆಡ್ ಮಿಲ್ ಟೆಸ್ಟ್(ಖಿಒಖಿ) ಮಾಡಲಾಯಿತು.
ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ. ಡಾ. ಎಂ ಪಶುಪತಿ, ಶುಶ್ರೂಷಕ ಅಧಿಕಾರಿ ಹರೀಶ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವಾಣಿ ಮೋಹನ್, ಎನ್‍ಎಬಿಎಚ್ ಸಂಯೋಜಕ ಸಯ್ಯದ್ ಮತೀನ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಮೂರ್ತಿ ಜುಪ್ತಿಮಠ್, ಬೀರೇಶ್, ಸುರೇಶ್ ಮತ್ತಿತರರು ಹಾಜರಿದ್ದರು.