ವರ್ಷಕಳೆದರೂ ರಾಜ್ಯದ 824 ವಸತಿಶಾಲಾ ಮಕ್ಕಳಿಗಿಲ್ಲ  ಎಣ್ಣೆ -ಸೋಪು ಕಿಟ್ ಭಾಗ್ಯ.


 ಬಿ.ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ. ಏ.5 :-  ಇಂದು ಪೋಷಕರಲ್ಲಿ ಶಿಕ್ಷಣದ ಪ್ರಜ್ಞೆ ಹೆಚ್ಚಾಗಿರುವುದರಿಂದ ತಮ್ಮ ಮಕ್ಕಳನ್ನು ಪ್ರತಿಷ್ಠಿತ ವಸತಿಶಾಲೆಗಳಿಗೆ ಪ್ರವೇಶ ಪರೀಕ್ಷೆ ಬರೆಯಿಸಿ ದಾಖಲು ಮಾಡುತ್ತಾರೆ. ಆದರೆ ವಸತಿಶಾಲೆಗಳು ದೀಪದ ಬುಡದಲ್ಲಿ ಕತ್ತಲು  ಎಂಬಂತೆ 2023-24ನೇ ಸಾಲಿನಲ್ಲಿ ಆಗಸ್ಟ್ ತಿಂಗಳಿಂದ ಇಲ್ಲಿಯವರೆಗೂ ರಾಜ್ಯದ  ವಸತಿಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಣ್ಣೆ – ಸೋಪು, ಬ್ರಷ್ ಪೇಸ್ಟಗಳಿರುವ ಕಿಟ್ ಬಂದಿಲ್ಲ ಎಂದರೆ ವಿದ್ಯಾರ್ಥಿಗಳು ಬೆಳಗಿನ  ನಿತ್ಯಕರ್ಮಗಳನ್ನು ಮಾಡುವುದಾದರೂ ಹೇಗೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತದೆ. ಯಾಕೆ ಬಂದಿಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ಕಾರಣ ಎಂದು ಅಧಿಕಾರಿಗಳು ಜಬೂಬು ಹೇಳಿ   ಕೈ ತೊಳೆದುಕೊಳ್ಳುತ್ತಾರೆ.
ರಾಜ್ಯದ ಎಲ್ಲಾ ಮಾದರಿಯ ವಸತಿಶಾಲೆಗಳು ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ  ಅಡಿಯಲ್ಲಿ ಬರುತ್ತಿದ್ದು ವಸತಿಶಾಲೆಗಳಿಗೆ ಆಹಾರ ಪೂರೈಕೆ ಆಡಳಿತ ಎಲ್ಲಾ ಈ ಕ್ರೈಸ್ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಕರ್ನಾಟಕ ವಸತಿಶಿಕ್ಷಣ ಸಂಸ್ಥೆಗಳ ಸಂಘ ಈ ಬಾರಿ ತಾಂತ್ರಿಕ ಕಾರಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿರುವ 800ಕ್ಕೂ ಹೆಚ್ಚು  ಮುರಾರ್ಜಿದೇಸಾಯಿ ವಸತಿಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗಳು, ಡಾ.ಬಿ.ಆರ್. ಅಂಬೇಡ್ಕರ್ ವಸತಿಶಾಲೆಗಳು ಸೇರಿದಂತೆ ಎಲ್ಲಾ ವಸತಿಶಾಲೆಗಳಲ್ಲಿ ಈ ವರ್ಷಪೂರ್ತಿ ಎಣ್ಣೆ ಸೋಪ್ ಕಿಟ್ ನೀಡದೇ ಇದ್ದುದರಿಂದ  ವಿದ್ಯಾರ್ಥಿಗಳ ದೈನಂದಿನ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ. ಇಲ್ಲಿಯವರೆಗೂ ಪೋಷಕರೇ ತಮ್ಮ ಮಕ್ಕಳಿಗೆ ಸೋಪ್ ಕಿಟ್ ನೀಡುವ ಮೂಲಕ  ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ
ಏನಿದು ಸೋಪ್ ಕಿಟ್ಃ  ರಾಜ್ಯದ ಎಲ್ಲಾ ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೆಳಗಿನ ಸ್ವಚ್ಛ ಕಾರ್ಯ ಮುಗಿಸಿಕೊಳ್ಳಲು ಸೋಪುಗಳು, ತಲೆಗೆ ಹಚ್ಚುವ ಎಣ್ಣೆ, ಹಲ್ಲುಜ್ಜುವ ಬ್ರಷ್, ಪೇಸ್ಟ್ ಸೇರಿದಂತೆ ಇನ್ನಿತರ ವಸ್ತುಗಳು ಇರುವ ಕಿಟ್ ಗಳನ್ನು ನೀಡಲಾಗುತ್ತದೆ. ಆದರೆ ಈ ವರ್ಷಪೂರ್ತಿ ಸೋಪ್ ಕಿಟ್ ಬಾರದೇ ಇದ್ದುದರಿಂದ ವಿದ್ಯಾರ್ಥಿಗಳು ನೊಂದು ಹೋಗಿದ್ದಾರೆ. ಯಾರಿಗೂ ಹೇಳಿಕೊಳ್ಳಲು ಆಗದೇ ಇರುವ ಪರಿಸ್ಥಿತಿ ಕೆಲವು ವಸತಿಶಾಲೆಗಳಲ್ಲಿದೆ. ಪೋಷಕರು ವಸತಿಶಾಲೆಗಳ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ನಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳು ವಸತಿಶಾಲೆಗಳಲ್ಲಿ ಸಿಗುತ್ತವೆ ಎಂಬ ಸಂತಸ ಇದೆ. ಆದರೆ ವರ್ಷಪೂರ್ತಿ ಅಧಿಕಾರಿಗಳು ತಮ್ಮ ಮಕ್ಕಳಿಗೆ ಸೋಪ್, ಬ್ರಷ್, ಪೇಸ್ಟ್  ನೀಡಿಲ್ಲ ಎಂದು ತಿಳಿದು ಈಗ ಆತಂಕಕ್ಕೊಳಗಾಗಿದ್ದಾರೆ.
ಕೂಡ್ಲಿಗಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿಶಾಲೆಯ ಮಕ್ಕಳಿಗೆ ಸೋಪ್, ಪೇಸ್ಟ್, ಬ್ರಷ್ ನೀಡಿಲ್ಲ ಎಂಬ ವಿಷಯ ಪೋಷಕರಿಂದ ತಿಳಿದು ನಾನು ಗುರುವಾರ ಕೂಡ್ಲಿಗಿಯ ವಸತಿಶಾಲೆಗೆ ಹೋಗಿದ್ದೆ ಅಲ್ಲಿ ಪ್ರಿನ್ಸಿಪಾಲರನ್ನು  ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಹೌದು ಈ ವರ್ಷ  ಸೋಪ್ ಕಿಟ್ ಬಂದಿಲ್ಲ ಎಂದು ತಿಳಿದು ಬಂದಿದ್ದರಿಂದ ಆಕ್ರೋಶವ್ಯಕ್ತಪಡಿಸಿದ್ದು ರಾಜ್ಯಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸೋಪ್, ಪೇಸ್ಟ್  ವರ್ಷಪೂರ್ತಿ ನೀಡಿಲ್ಲ ಎಂದರೆ ಹೇಗೆ , ಇಲ್ಲೇ ನಮ್ಮ ಶಿಕ್ಷಣ ವ್ಯವಸ್ಥೆ ಗೊತ್ತಾಗುತ್ತದೆ, ಯಾರಿಂದ ತಪ್ಪು ಆಗಿದೆ ಎಂಬುದನ್ನು ಪರಿಶೀಲಿಸಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎನ್ನುತ್ತಾರೆ ವಿಜಯನಗರ ಜಿಲ್ಲೆ ಡಾ. ಬಿ.ಆರ್.ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಪಿ. ಸಂತೋಷ್ ಕುಮಾರ್. 
  ಇದು ರಾಜ್ಯಮಟ್ಟದಲ್ಲಿ ನಮ್ಮ ಕ್ರೈಸ್ ಸಂಸ್ಥೆಯಿಂದ ಟೆಂಡರ್ ಆಗಿ  ಸೋಪ್ ಕಿಟ್ ಬರಬೇಕಿತ್ತು. ಆದರೆ ಈ ವರ್ಷ ಆಗಸ್ಟ್ ನಿಂದ ಇಲ್ಲಿಯವರೆಗೂ ಬಂದಿಲ್ಲ ಈಗಾಗಿ ನಾವು ವಿದ್ಯಾರ್ಥಿಗಳಿಗೆ ಸೋಪ್ ಕಿಟ್ ವಿತರಿಸಿಲ್ಲ ಪೋಷಕರೇ ತಮ್ಮ ಮಕ್ಕಳಿಗೆ ಸೋಪ್ ಕಿಟ್ ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ದೈನಂದಿನ ಶೌಚ ಸ್ವಚ್ಛಕಾರ್ಯಕ್ಕೆ ನೆರವಾಗಿದ್ದಾರೆ ಎನ್ನುತ್ತಾರೆ. ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ವಸತಿಶಾಲೆಯ ಪ್ರಾಂಶುಪಾಲರಾದ ಶೋಭಾ.
ತೊಂದರೆಯಾಗಿದೆ: ತಾಂತ್ರಿಕ ಕಾರಣದಿಂದ ರಾಜ್ಯಾದ್ಯಂತ ಈ ವರ್ಷದಲ್ಲಿ ಸೋಪ್ ಕಿಟ್ ನೀಡಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಯಾವ ವಸತಿ ಶಾಲೆಗಳಿಗೂ ಸೋಪ್ ಕಿಟ್ ಈ ಬಾರಿ ನೀಡಲು ಆಗಿಲ್ಲ ಎನ್ನುತ್ತಾರೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ.