ವರ್ತೂರು ವಿರುದ್ಧ ಗೋವಿಂದರಾಜು ಆಕ್ರೋಶ

ಕೋಲಾರ,ನ,೧- ರಾಜಕೀಯವಾಗಿ ಎದುರಿಸುವ ಶಕ್ತಿ ಇಲ್ಲದೆ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿದ್ಯುತ್ ಸ್ಥಗಿತಗೊಳಿಸುವ ನೀಚ ಕೃತ್ಯಕ್ಕೆ ಮಾಜಿ ಸಚಿವ, ವರ್ತೂರು ಪ್ರಕಾಶ್ ಇಳಿದಿದ್ದು, ನಿಮ್ಮ ಆಟ ಏನಿದ್ದರೂ ೬ ತಿಂಗಳು ಮಾತ್ರ ಎಂದು ಎಂಎಲ್ಸಿ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ದಿಂಬ ಚಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಜೆಡಿಎಸ್ ಪಕ್ಷದ ಮುಖಂಡರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧೈರ್ಯವಿದ್ದರೆ ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಕಾರ್ಯಕ್ರಮದ ವೇಳೆಗೆ ವಿದ್ಯುತ್ ಸ್ಥಗಿತಗೊಳಿಸುವ ಕೆಲಸಗಳನ್ನು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಕೋಲಾರ ಕ್ಷೇತ್ರದಲ್ಲಿ ಕಳೆದ ೧೪ ವರ್ಷಗಳಿಂದ ಶಾಸಕರ ಸ್ಥಾನದಲ್ಲಿ ನರಕಾಸುರರನ್ನು ನೋಡಿದ್ದು, ದೀಪಾವಳಿಯ ಪಟಾಕಿಯಂತೆ ಮುಂದಿನ ಚುನಾವಣೆಯಲ್ಲಿ ಹೊಡೆದು ಕಳುಹಿಸಬೇಕೆಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ಅವರ ೧೦ ವರ್ಷದ ಸಾಧನೆ ಬಗ್ಗೆ ಎಲ್ಲಿ ನೋಡಿದರೂ ಹೇಳಿದ್ದೇ ಹೇಳಿದ್ದು. ನಿಮ್ಮೂರಿನ ರಸ್ತೆ ನೋಡಿದರೆ ಗೊತ್ತಾಗುತ್ತದೆ ಅವರ ಸಾಧನೆ ಎಂದು ಲೇವಡಿ ಮಾಡಿದ ಅವರು, ಕತ್ತಲು ಸರಿದು ಬೆಳಕು ಚೆಲ್ಲುವ ಮೂಲಕ ನಿಮ್ಮ ಗ್ರಾಮಕ್ಕೆ ಬಂದಿದೆ. ೬ ತಿಂಗಳು ಕಾಯಬೇಕು ಅಷ್ಟೇ ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ, ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕರಾಗುತ್ತಾರೆ ಎಲ್ಲ ಸಮಸ್ಯೆ ಬಗೆಹರಿಸಿ, ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ೧೨ ವರ್ಷ ವನವಾಸ ಹಾಗೂ ೨ ವರ್ಷ ಅಜ್ಞಾತವಾಸ ಕೆಳೆದಿದ್ದು ಮುಂದಿನ ವರ್ಷ ಜೆಡಿಎಸ್‌ಗೆ ಅಧಿಕಾರ ಸಿಗುತ್ತದೆ.ನಾವು ಅಶೀರ್ವಾದ ಮಾಡಿದ ವ್ಯಕ್ತಿ (ಕೆ.ಶ್ರೀನಿವಾಸಗೌಡ) ನಮಗೆ ಅನ್ಯಾಯ ಮಾಡಿ ಮತ್ತೊಬ್ಬರ ಜತೆ ಹೋಗಿ, ಯಾರನ್ನೋ ಸಿಎಂ ಮಾಡಲು ಹೊರಟಿದ್ದಾರೆ. ಯಾರೇ ಬಂದರೂ ಕೂಡ ಕೋಲಾರ ಕ್ಷೇತ್ರದ ಜನತೆ ಸ್ವಾಭಿಮಾನದಿಂದ ಸ್ಥಳೀಯರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಸಿಎಂಆರ್ ಶ್ರೀನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿದರು.
ದೊಡ್ಡಹಸಾಳ ಗ್ರಾಪಂ ಉಪಾಧ್ಯಕ್ಷ ಗ್ಯಾಸ್ ನಾರಾಯಣಸ್ವಾಮಿ ಜೆಡಿಎಸ್‌ಗೆ ಸೇರ್ಪಡೆಯಾದರು ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮುಖಂಡರಾದ ಸಿಎಂಆರ್ ಹರೀಶ್, ಡಿವಿ ರಾಮಚಂದ್ರಪ್ಪ, ದಿಂಬ ನಾಗರಾಜಗೌಡ, ಛತ್ರಕೋಡಿಹಳ್ಳಿ ಕುಮಾರ್, ಗ್ರಾಪಂ ಸದಸ್ಯರಾದ ಶೋಭಾ, ರಾಜಣ್ಣ, ಮುಖಂಡ ಪಿಎಲ್‌ಡಿ ಬ್ಯಾಂಕ್ ಮಂಜುನಾಥ್, ಕೂಟೇರಿ ನಾಗರಾಜ್, ಕುರುಬರಹಳ್ಳಿ ಶ್ರೀನಾಥ್, ನಾರಾಯಣಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ವೆಂಕಟೇಶಪ್ಪ, ಪಾಪಣ್ಣನವರ ವೆಂಕಟೇಶ್, ಗದ್ದೆಕಣ್ಣೂರು ಶ್ರೀನಾಥ್, ಆನಂದ್, ಕೇಶವ, ಅಶೋಕ್, ಸುರೇಶ್, ರಘು ಇದ್ದರು