ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.22:- ವರ್ತಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಎಚ್.ಬಿ. ರಾಜಶೇಖರ್ ಆಯ್ಕೆಯಾದರು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ನಾಲ್ವರು ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು.
ವರ್ತಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎಚ್.ಬಿ. ರಾಜಶೇಖರ್ ಹಾಗೂ ಎನ್. ಶಂಕರ್ ಅವರು ನಾಮಪತ್ರ ಸಲ್ಲಿಸಿದರು. 21 ಮಂದಿ ನೂತನ ನಿರ್ದೇಶಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಎಚ್.ಬಿ. ರಾಜಶೇಖರ್ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಎನ್. ಶಂಕರ್ 9 ಮತಗಳನ್ನು ಪಡೆದುಕೊಂಡಿದ್ದರು. ಉಪಾಧ್ಯಕ್ಷರಾಗಿ ಸಿ.ಎಸ್.ಮಹೇಶ್‍ಕುಮಾರ್ ಆಯ್ಕೆಯಾದರು. ಉಳಿದಂತೆ ಕಾರ್ಯದರ್ಶಿಯಾಗಿ ಕೆ.ಎಸ್. ಚಿದಾನಂದಗಣೇಶ್, ಸಹ ಕಾರ್ಯದರ್ಶಿಯಾಗಿ ಎಂ. ಕಮಲ್‍ರಾಜ್ ಹಾಗೂ ಖಜಾಂಚಿಯಾಗಿ ಎಚ್.ಬಿ. ವಿಶ್ವಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ ಸಂಘದ ಮಾಜಿ ಅಧ್ಯಕ್ಷರಾದ ಎಸ್. ಬಾಲಸುಬ್ರಮಣ್ಯ, ಶ್ರೀನಿವಾಸ್ ಎಸ್‍ಆರ್‍ಎಸ್, ಕಾನೂನು ಸಲಹೆಗಾರರ ನಂದಕುಮಾರ್ ಕರ್ತವ್ಯ ನಿರ್ವಹಿಸಿದರು.
ಸಂಘದ ಅಭಿವೃದ್ದಿಗೆ ಬದ್ದ : ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಬಿ. ರಾಜಶೇಖರ್ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಚಿರಋಣಿ, ಮುಂದಿನ ದಿನಗಳಲ್ಲಿ ವರ್ತಕರ ಅಭಿವೃದ್ದಿ ಮತ್ತು ಕುಂದುಕೊರತೆಯನ್ನು ಬಗೆಹರಿಸುವ ಜೊತೆಗೆ ವರ್ತಕರು ಮತ್ತು ಗ್ರಾಹಕರ ಸಮನ್ವಯತೆಯನ್ನು ಸಾಧಿಸಿ, ಸಂಘವನ್ನು ಮಾದರಿ ಸಂಘವನ್ನಾಗಿಸಲು ನಿಮ್ಮೇಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಎಪಿಎಂಸಿ ನಿರ್ದೇಶಕ ವೆಂಕಟರಾವ್ ಸಾಠೆ ನೂತನ ಅಧ್ಯಕ್ಷರು,ಪದಾಧಿಕಾರಿಗಳನ್ನು ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಸಂಘದ ಮಾಜಿ ಅಧ್ಯಕ್ಷರು, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.