ವರ್ಗಾವಣೆ ರದ್ಧತಿಗೆ ಡಿಸಿ ರೋಹಿಣಿ ಮನವಿ

ಬೆಂಗಳೂರು, ಜೂ.೬- ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಎತ್ತಂಗಡಿಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವರ್ಗಾವಣೆಯನ್ನು ರದ್ದು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ನಿನ್ನೆ ರಾತ್ರಿ ವರ್ಗಾವಣೆ ಮಾಡಿದ ಬೆನ್ನಲ್ಲೆ ರೋಹಿಣಿ ಸಿಂಧೂರಿ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ತಮ್ಮ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಆರೋಪಗಳು ನಿರಾಧಾರ, ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಗೂ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ಕೆಲ ರಾಜಕಾರಣಿಗಳನ್ನು ವಿನಾಕಾರಣ ಇದೆಲ್ಲವನ್ನೂ ಸೃಷ್ಟಿಸಿದ್ದಾರೆ. ಇವೆಲ್ಲ ಸುಳ್ಳು ತಮ್ಮ ವರ್ಗಾವಣೆಯನ್ನು ರದ್ದು ಮಾಡಿ, ಮೈಸೂರು ಜಿಲ್ಲಾಧಿಕಾರಿ ಹುದ್ದೆಯಲ್ಲೇ ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆನ್ನಲಾಗಿದೆ.
ಮೈಸೂರಿನ ಕೊರೊನಾ ನಿರ್ವಹಣೆ ಸೇರಿದಂತೆ ಎಲ್ಲ ವಿಚಾರಗಳ ವಾಸ್ತವಾಂಶವನ್ನು ರೋಹಿಣಿ ಸಿಂಧೂರಿ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರಾದರೂ ಮುಖ್ಯಮಂತ್ರಿಗಳು ಸದ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಪಾಲಿಸಿ ಮುಂದೆ ನೋಡೋಣ ಎಂದು ಹೇಳಿದರು ಎನ್ನಲಾಗಿದೆ.
ರಾತ್ರೋರಾತ್ರಿ ವರ್ಗಾವಣೆ
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ನಡುವಿನ ಜಟಾಪಟಿ ಹಿನ್ನೆಲೆಯಲ್ಲಿ ಸರ್ಕಾರ ನಿನ್ನೆ ರಾತ್ರಿ ಈ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ, ಶಿಲ್ಪಾನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ (ಇ-ಆಡಳಿತ)ವರ್ಗಾವಣೆ ಮಾಡಲಾಗಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಭಗಾದಿ ಗೌತಮ್ ಅವರನ್ನು ನೇಮಕ ಮಾಡಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಡಳಿತ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.