ವರ್ಗಾವಣೆ ದಂಧೆ, ಸಿಎಂ ಕಚೇರಿಯಲ್ಲಿ ಹುಂಡಿ

ಬೆಂಗಳೂರು,ಜೂ.೨೮:ಪಂಚ ಗ್ಯಾರಂಟಿಗಳ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದಂತೆ ವರ್ಗಾವಣೆ ಕೊಚ್ಚೆಯಲ್ಲಿ ಉರುಳಾಡುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ವರ್ಗಾವರ್ಗಿ ದಂಧೆಗೆ ಹುಂಡಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸ್ಸು ಪತ್ರ ಕೊಟ್ಟಿರುವ ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ನಾಲ್ಕು ಶಿಫಾರಸ್ಸು ಹಿಂದಿರುವ ಅತೀಂದ್ರ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಬಂದ ಮೊದಲ ದಿನದಿಂದಲೇ ಕಾಸಿಗಾಗಿ ಪೋಸ್ಟಿಂಗ್ ದಂಧೆ ಶುರುವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದರ ಬದಲು ಬಂದಿದ್ದನ್ನು ಬಿಡದೆ ಬಾಚಿಕೋ ಎಂಬುದು ಈ ಸರ್ಕಾರದ ಧ್ಯೇಯ ನೀತಿಯಾಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ ಬಿಟ್ಟಿ ಭಾಗ್ಯದ ಬೆಲ್ಲದ ಆಮಿಷ ವೊಡ್ಡಿ ಲೂಟಿ ಪರ್ವಕ್ಕೆ ಹುಂಡಿ ಇಡಲಾಗಿದೆ ಎಂದು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಒಂದೇ ಹುದ್ದೆಗೆ ಮುಖ್ಯಮಂತ್ರಿಯವರೇ ೪ ಶಿಫಾರಸ್ಸು ಪತ್ರ ಕೊಟ್ಟಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನೂ ನಡೆಯುತ್ತಿದೆ. ಸಿಎಂಓ ಕರ್ನಾಟಕವೋ ಅಥವಾ ಕರೆಪ್ಷನ್ ಆಫ್ ಕರ್ನಾಟಕವೋ ಎಂದು ಅವರು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ಹುಂಡಿ ಇದೆ ಎಂದು ದಾಖಲೆ ಸಮೇತ ಬಟಾಬಯಲಾಗಿದೆ. ವರ್ಗಾವರ್ಗಿಯ ಪೇಮೆಂಟ್ ಕೋಟಾ ನಿಯಂತ್ರಣ ಮಾಡುತ್ತಿರುವ ಆ ರಿಮೋಟ್ ಕಂಟ್ರೋಲ್ ಬಗ್ಗೆ ಜನರಿಗೆ ಅರ್ಥವಾಗುತ್ತಿದೆ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.