ವರ್ಗಾವಣೆ ಐಜಿಪಿ ರೂಪಾ ಅಸಮಾಧಾನ

ಬೆಂಗಳೂರು,ಜ.೧: ನಿರ್ಭಯ ಸೇಫ್ ಸಿಟಿ ಯೋಜನೆ ಟೆಂಡರ್ ಅಕ್ರಮ ಕುರಿತು ಧ್ವನಿಯೆತ್ತಿದ್ದಕ್ಕೆ ಗೃಹ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿರುವ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ವರ್ಗಾವಣೆ ಮಾಡಿರುವ ಕುರಿತು ಐಜಿಪಿ ರೂಪಾ ಅವರು ಟ್ವಿಟ್ಟರ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ.
ನಿರ್ಭಯ ಸೇಫ್ ಸಿಟಿ ಯೋಜನೆ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಐ ಅಂಡ್ ವೈ ಕಂಪನಿಗೆ ಕರೆಮಾಡಿ ದಾಖಲೆಗಳನ್ನು ರೂಪಾ ಅವರು ಕೇಳಿದ್ದರು. ಸಂಬಂಧವಿಲ್ಲದ ವ್ಯಕ್ತಿ ಮೂಗು ತೂರಿಸುತ್ತಿದ್ದು, ಈ ಕುರಿತು ತನಿಖೆ ನಡೆಸುವಂತೆ ಕೋರಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ನಿಂಬಾಳ್ಕರ್ ಪತ್ರ ಹೊರ ಬರುತ್ತಿದ್ದಂತೆ ನಿರ್ಭಯ ಸೇಫ್ ಸಿಟಿ ಯೋಜನೆಯ ಟೆಂಡರ್ ಅಕ್ರಮ ಕುರಿತು ರೂಪಾ ಅವರು ಕೆಲ ದೂರುಗಳ ಮಾಹಿತಿ ಹೊರ ಹಾಕಿದರು.
ಇದು ಇಬ್ಬರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.
ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರೂ ಕೂಡ ರೂಪಾ ಅವರು ಸುಮ್ಮನೆ ಕೂರಲಿಲ್ಲ. ಬದಲಿಗೆ ನಿಂಬಾಳ್ಕರ್ ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಿ ಟೆಂಡರ್ ನಲ್ಲಿ ಆಗಿದ್ದ ನಿಯಮ ಉಲ್ಲಂಘನೆ ಅಂಶಗಳನ್ನು ಬಹಿರಂಗಪಡಿಸಿದ್ದರು.
ಇಬ್ಬರು ಐಪಿಎಸ್ ಗಳ ಕಚ್ಚಾಟ ಸರ್ಕಾರದ ಮಟ್ಟದಲ್ಲಿ ಮುಜುಗರಕ್ಕೆ ಈಡು ಮಾಡಿತ್ತು. ರೂಪಾ ಅವರಿಗೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ನೋಟಿಸ್ ನೀಡಿದ್ದರು. ಹೇಮಂತ್ ನಿಂಬಾಳ್ಕರ್ ಅವರಿಗೆ ಏಕೆ ನೋಟಿಸ್ ನೀಡಿಲ್ಲ. ನನಗೆ ಮಾತ್ರ ಯಾಕೆ ಕೊಟ್ಟಿದ್ದೀರಿ ಎಂದು ರೂಪಾ ಪ್ರಶ್ನಿಸಿದ್ದರು.
ಇದು ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಮುಜುಗರದಿಂದ ಪಾರಾಗಲು ಪ್ರಯತ್ನಿಸಿತ್ತು.
ಹೀಗಿರುವಾಗಲೇ ಗೃಹ ಕಾರ್ಯದರ್ಶಿ ಹುದ್ದೆಯಿಂದ ರೂಪಾ ಅವರನ್ನು ಎತ್ತಂಗಡಿ ಮಾಡಿ ನಿನ್ನೆ ರಾತ್ರಿ ವರ್ಗಾವಣೆ ಆದೇಶ ಹೊರ ಬಿದ್ದಿತ್ತು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮತ್ತೊಂದೆಡೆ ಬೆಂಗಳೂರು ಆಡಳಿತ ವಿಭಾಗದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ವರ್ಗಾವಣೆ ಆದೇಶದ ಬಗ್ಗೆ ರೂಪಾ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ವರ್ಗಾವಣೆ ಬಂದಿದೆ. ಕರಕುಶಲ ನಿಗಮದ ಎಂಡಿ ಎಂದು. ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ಹೇಳಿ ಡಿಸೆಂಬರ್ ( ಒಂದು ವರ್ಷದ ಹಿಂದೆ) ಶಿಫಾರಸು ಮಾಡಿದ್ದರೂ, ಇನ್ನೂ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. ಈ ವರ್ಗಾವಣೆ ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನು ಒಂದೇ ತಕ್ಕಡಿಯಲ್ಲಿ ಅಳೆದಂತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ನಾನು ಕರಕುಶಲ ನಿಗಮದ ಎಂಡಿ ಯಾಗಿ ಅಧಿಕಾರ ಸ್ವೀಕರಿಸುತ್ತೇನೆ. ಭ್ರಷ್ಟಾಚಾರದ ಬಗ್ಗೆ ಧ್ವನಿಯೆತ್ತಿದ್ದೇ ತಪ್ಪಾ ಎಂದು ರೂಪಾ ಪ್ರಶ್ನಿಸಿದ್ದಾರೆ.