ವರ್ಗಾವಣೆಯಲ್ಲಿ ಭಾರಿ ಅಕ್ರಮ: ಜೋಶಿ ಆರೋಪ

ಹುಬ್ಬಳ್ಳಿ, ಜು 8: ರಾಜ್ಯದಲ್ಲಿ ವರ್ಗಾವಣೆ ವಿಷಯದಲ್ಲಿ ಭಾರಿ ಅಕ್ರಮ ನಡೆಯುತ್ತಿದ್ದು, ಹರಾಜು ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ `ಪೆನ್‍ಡ್ರೈವ್’ ಬಾಂಬ್ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಪ್ರಮುಖ ಹುದ್ದೆಗಳಿಗೆ ಹರಾಜು ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ ಎಂದರು.

ಕುಮಾರಸ್ವಾಮಿ ಅಧಿಕೃತ ವಿಪಕ್ಷ ನಾಯಕನ ಕಾರ್ಯ ನಿರ್ವಹಿಸುತ್ತಿದ್ದಾರೆಂಬ ಟೀಕೆಗಳನ್ನು ತಳ್ಳಿಹಾಕುತ್ತ, ಅವರು ಜೆಡಿಎಸ್ ಪಕ್ಷದ ನಾಯಕರಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದ ಜೋಶಿ, ಬಿಜೆಪಿಯ ವಿರೋಧ ಪಕ್ಷದ ನಾಯಕರ ಆಯ್ಕೆ ಇಂದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

ಸಾಲದ ಕೂಪಕ್ಕೆ ರಾಜ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದರೋ, ಬಿಜೆಪಿಯನ್ನು ಬೈದರೋ ಅರ್ಥವಾಗುತ್ತಿಲ್ಲ ಎಂದ ಅವರು, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿ ಸಿದ್ದರಾಮಯ್ಯ ತಮ್ಮ ರಾಜಕೀಯ ಚಟ ತೀರಿಸಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.
ಇದು ಅಭಿವೃದ್ಧಿಗೆ ಪೂರಕವಲ್ಲದ, ಮೂಲಭೂತ ಸೌಕರ್ಯಗಳು ನೆಲಕಚ್ಚುವ, ಸಂಪೂರ್ಣ ತುಷ್ಟೀಕರಣದ ಬಜೆಟ್ ಎಂದವರು ನುಡಿದರು.

ಆಸ್ತಿಕರ ಏರಿಕೆ ಮಾಡಲಾಗಿದೆ, ಅಬಕಾರಿ ಟಾರ್ಗೆಟ್ ಕೊಡಲಾಗಿದೆ, ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣತಂದುಕೊಡಿ ಎನ್ನುವ ಸೂತ್ರ ಇವರದು ಎಂದು ಕುಟುಕಿದರು.

ಯುವಶಕ್ತಿಗೆ ನಯಾಪೈಸೆ ಇಟ್ಟಿಲ್ಲ. ರೇಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ, ಶಾಸಕರಿಗೆ ಅನುದಾನ ಕೇಳಬೇಡಿ ಎಂದು ನೇರವಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಜೋಶಿ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿರುವ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಟ್ರಯಲ್ ಕೋರ್ಟ್‍ನಲ್ಲಿ ಕ್ಷಮೆ ಯಾಚಿಸುವಂತೆ ಸಲಹೆ ಕೊಟ್ಟಾಗ ರಾಹುಲ್ ನಾನು ಅಂದದ್ದೇ ಸರಿ, ನನ್ನ ಹೇಳಿಕೆ ವಾಪಸ್ ಪಡೆಯುವುದಿಲ್ಲ ಎಂದರು. ರಾಹುಲ್ ನಡೆ ಅಪ್ರಬುದ್ಧತೆ ಮತ್ತು ಅಹಂಕಾರದ್ದು. ಕಾಂಗ್ರೆಸ್‍ನವರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ? ಮೊದಲು ಹೋಗಿ ರಾಹುಲ್‍ಗೆ ಬುದ್ಧಿ ಹೇಳಲಿ ಎಂದು ಜೋಶಿ ನುಡಿದರು.