ವರ್ಗಾವಣೆಯತ್ತ ಜಿಲ್ಲಾಧಿಕಾರಿ ಚಿತ್ತ

ಎಂ. ರಮೇಶ್ ಚಿ. ಸಾರಂಗಿ
ತುಮಕೂರು, ಜ. ೧೦- ಕೊರೊನಾ ಆರ್ಭಟ, ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಕಲ್ಪತರುನಾಡು ಇದೀಗ ನಿಧಾನವಾಗಿ ಅಭಿವೃದ್ಧಿ ಕಾರ್ಯಗಳತ್ತ ಮುಖ ಮಾಡುತ್ತಿದ್ದರೆ, ಜಿಲ್ಲೆಯ ಆಡಳಿತದ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿ ಮಾತ್ರ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸದೆ ತಮ್ಮ ಮುಂದಿನ ಜಾಗ ಹುಡುಕಾಟ ನಡೆಸುವ ಮೂಲಕ ವರ್ಗಾವಣೆಯತ್ತ ಚಿತ್ತ ಹರಿಸಿದ್ದಾರೆ.
ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಅವರ ಶಿಫಾರಸ್ಸು ಪಡೆದು ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ತುಮಕೂರಿಗೆ ಪ್ರಪ್ರಥಮ ಬಾರಿಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲಾ ಉಸ್ತುವಾರಿಯಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಬದಲಾಗುತ್ತಾರೆ ಎಂಬ ಮಾತುಗಳು ಸಹಜವಾಗಿಯೇ ಕೇಳಿ ಬಂದಿದ್ದವು.
ಅಷ್ಟರಲ್ಲಾಗಲೇ ಬಿಜೆಪಿಯ ಸಂಸದರ ಶಿಫಾರಸ್ಸಿನೊಂದಿಗೆ ತಮ್ಮ ಜಾಗ ಭದ್ರಪಡಿಸಿಕೊಂಡಿದ್ದ ಜಿಲ್ಲಾಧಿಕಾರಿ ಮುಂದುವರಿಕೆಗೆ ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಸಮ್ಮತಿಸಿದ್ದರು ಎನ್ನಲಾಗಿದೆ.
ಸುಮಾರು ೩ ವರ್ಷಗಳ ಕಾಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ದಿನ ಕಳೆದಂತೆ ಆರೋಪಗಳ ಸುಳಿಗೆ ಸಿಲುಕುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲೂ ಇವರ ವಿರುದ್ಧ ಆರೋಪಗಳ ಸರಮಾಲೆಯೇ ಕೇಳಿ ಬರುತ್ತಿದೆ.
ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ಸಮನ್ವಯತೆ ಸಾಧಿಸಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ವಿಚಾರದಲ್ಲೂ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದಲೇ ಕೇಳಿ ಬಂದಿವೆ.
ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಪ್ರತಿನಿತ್ಯ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ತಮ್ಮ ಕೈಕೆಳಗಿನ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ನಿದರ್ಶನಗಳಿಲ್ಲ.
ತುಮಕೂರು ತಾಲ್ಲೂಕು ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಇನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕೆಳ ಅಂತಸ್ತಿನಲ್ಲೇ ಇರುವ ತಹಶೀಲ್ದಾರ್ ಕಚೇರಿಯಲ್ಲೂ ಭ್ರಷ್ಟಾಚಾರ ಮೇಳೈಸುತ್ತಿರುವ ಬಗ್ಗೆ ಅನೇಕ ಬಾರಿ ಬಹಿರಂಗವಾಗಿಯೇ ದೂರುಗಳು ಕೇಳಿ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಗಳಿವೆ.
ಕಂದಾಯ ನಿರೀಕ್ಷಕರುಗಳು, ಗ್ರಾಮ ಲೆಕ್ಕಿಗರು ಸೊಳ್ಳೆಗಳು ಮನುಷ್ಯನ ರಕ್ತ ಹೀರುವ ರೀತಿ ದೇಶದ ಬೆನ್ನೆಲುಬಾಗಿರುವ ರೈತರಿಂದ ಹಣ ಸುಲಿಗೆ ಮಾಡುತ್ತಿದ್ದರೂ ಯಾವುದೇ ರೀತಿಯ ಚಕಾರವೆತ್ತಿಲ್ಲ. ಪ್ರತಿನಿತ್ಯ ತಾಲ್ಲೂಕು ಕಚೇರಿಗಳಿಗೆ ಬರುವ ರೈತರು ಕಂದಾಯ ಇಲಾಖೆಗೆ ಹಿಡಿಶಾಪ ಹಾಕುತ್ತಾ ಖಾತೆ, ಪಹಣಿ ವರ್ಗಾವಣೆ ಇನ್ನಿತರೆ ದಾಖಲಾತಿಗೆ ಹಣ ನೀಡಿ ಪಡೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಆದರೂ ಈ ಬಗ್ಗೆ ಒಂದು ಬಾರಿಯೂ ಜಿಲ್ಲಾಧಿಕಾರಿಗಳು ತುಟಿ ಬಿಚ್ಚಿಲ್ಲ ಎಂಬುದು ರೈತರ ದೂರು.
ಗ್ರಾಮ ಲೆಕ್ಕಿಗರು ಖಾತೆ, ಪಹಣಿ ಮಾಡಿಕೊಡಲು ಬಹಿರಂಗವಾಗಿಯೇ ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಖುದ್ದು ಪತ್ರಕರ್ತರೇ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಅಸಹಾಯಕತೆ ಪ್ರದರ್ಶಿಸಿರುವ ನಿದರ್ಶನಗಳೂ ಇವೆ.
ಹೀಗಾಗಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ರೈತರಿಗೆ ಪಾರದರ್ಶಕ, ಪ್ರಾಮಾಣಿಕೆ ಸೇವೆ ಒದಗಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.