ವರ್ಗಾವಣೆಗೊಂಡ ಶಿಕ್ಷಕರಿಗೆ ಆತ್ಮೀಯ ಬೀಳ್ಕೊಡುಗೆ

ಪಾವಗಡ, ಆ. ೮- ತಾಲ್ಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ೧೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿರುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಗಳಾದ ಡಿ .ಪ್ರಕಾಶ್ ಹಾಗೂ ಮೃತ್ಯುಂಜಯ ರವರನ್ನು ಶಾಲೆಯಲ್ಲಿ ಸಿಬ್ಬಂದಿ ವರ್ಗ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಮುಖಂಡ ಲೋಕೇಶ್ ಪಾಳೇಗಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ಗುರು-ಹಿರಿಯರ ಹಾದಿಯಲ್ಲಿ ಅವರು ಕೊಟ್ಟ ಬೋಧನೆಯನ್ನು ತನ್ನ ಜ್ಞಾನರ್ಜನೆಗೆ ಬಳಸಿಕೊಳ್ಳಬೇಕು. ಶಾಲೆಯ ಮಕ್ಕಳು ಗುರುಗಳ ಮಾರ್ಗದರ್ಶನದೊಂದಿಗೆ ಉನ್ನತ ಸ್ಥಾನಕ್ಕೆ ತಲುಪುವ ಗುರಿ ಹೊಂದಿರಬೇಕು. ತಂದೆ-ತಾಯಿ, ಗುರು-ಹಿರಿಯರ ನುಡಿ-ಆಚಾರ- ವಿಚಾರಗಳನ್ನು ವಿದ್ಯಾರ್ಥಿಗಳು ಮೈಗುಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಅನ್ನೋ ಪದಕ್ಕೆ ಅರ್ಥ ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.
ಪಾವಗಡ ಗಡಿಭಾಗದ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರ ಸೇವೆ ಪ್ರಶಂಸನೀಯ ಎಂದರು.
ಮುಖ್ಯ ಶಿಕ್ಷಕ ಧನಂಜಯ್ ಮಾತನಾಡಿ, ಒಬ್ಬ ಒಳ್ಳೆಯ ಶಿಕ್ಷಕ ತನ್ನ ಜೀವನದಲ್ಲಿ ಪ್ರಾಮಾಣಿಕ ವೃತ್ತಿ ನಿಭಾಯಿಸಿಕೊಂಡು ಹೋದಲ್ಲಿ ಮಕ್ಕಳಿಗೆ ದೊಡ್ಡ ಮಟ್ಟದ ಜ್ಞಾನ ಭಂಡಾರ ದೊರೆತಂತೆ ಶಿಕ್ಷಕರಲ್ಲಿರುವ ಜ್ಞಾನವನ್ನು ತನ್ನ ಶಕ್ತಿ ಮೀರಿ ಮಕ್ಕಳಿಗೆ ಜ್ಞಾನವನ್ನು ಬಿತ್ತರಿಸಬೇಕು. ಅಂತಹ ಪ್ರಾಮಾಣಿಕ ಶಿಕ್ಷಕನಿಗೆ ಇಂತಹ ವೇದಿಕೆಗಳಲ್ಲಿ ಗೌರವ ಸಲ್ಲುತ್ತದೆ. ಸಮಾಜದಲ್ಲಿ ಉತ್ತಮ ಗೌರವ ಸಿಗಬೇಕಾದರೆ ಪ್ರತಿಯೊಬ್ಬರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಗೌಡೇಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಶಪ್ಪ ಎಂ. ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಡಿ. ಪ್ರಕಾಶ್ ಹಾಗೂ ಮೃತ್ಯುಂಜಯ ಅವರ ಶೈಕ್ಷಣಿಕ ಮಕ್ಕಳ ಪ್ರಗತಿ ಕಲಿಕೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಇಂತಹ ಶಿಕ್ಷಕರನ್ನು ಕಳೆದುಕೊಳ್ಳುತ್ತಿರುವ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಡಿ. ಪ್ರಕಾಶ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾದ ಕೃಷ್ಣ ಮಹಾಂತಪ್ಪ ಪೂಜಾರಿ, ಲಾವಣ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ .ಮಂಜುನಾಥ್, ಮುಖಂಡರಾದ ಓಂಕಾರನಾಯಕ, ನರಸಿಂಹಮೂರ್ತಿ, ಪಾಂಡುರಂಗಪ್ಪ, ಗೋವಿಂದಪ್ಪ ಮತ್ತಿತರರು ಭಾಗವಹಿಸಿದ್ದರು.