ಮೈಸೂರು: ಏ.18:- ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರದ ಸ್ಥಾನಮಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಂಜನಗೂಡು ಪಟ್ಟಣದ ಹೊರವಲಯದ ಗೋಳೂರು ಗ್ರಾಮದ ಬಳಿ ಬಿಜೆಪಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
2008ರಲ್ಲಿ ವರುಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ.
ಆದರೆ ವರುಣಕ್ಕೆ ತಾಲ್ಲೂಕು ಕೇಂದ್ರ ಇಲ್ಲದಿರುವುದು ವಿಪರ್ಯಾಸ. ಆದರೆ, ನಮ್ಮ ಸರ್ಕಾರ ಬರುತ್ತಿದ್ದಂತೆ ವರುಣಾವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ವರುಣ ಇದೀಗ ವರ್ಣಮಯವಾಗಿದೆ. ಇಷ್ಟು ವರ್ಷ ವರುಣದ ಹೆಸರು ಮೈಸೂರು ಜಿಲ್ಲೆಯನ್ನು ದಾಟಿ ಹೋಗಿರಲಿಲ್ಲ. ಚಾಮುಂಡೇಶ್ವರಿ ದಯೆಯಿಂದ ಒಬ್ಬ ವ್ಯಕ್ತಿ ಇಲ್ಲಿಗೆ ಬಂದ ನಂತರ ವರುಣ ಹೆಸರು ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲೇ ಗಮನ ಸೆಳೆದಿದೆ. ಆ ವ್ಯಕ್ತಿ ಯಾರೆಂದರೆ ವಿ ಸೋಮಣ್ಣ ಅವರು. ವಿ ಅಂದರೆ ವಿಕ್ಟರಿ, ವಿಕ್ಟರಿ ಸೋಮಣ್ಣ ಎಂದು ಬಣ್ಣಿಸಿದರು.
ದೀನ ದಲಿತರು ಹಿಂದುಳಿದವರ ಮತ ಪಡೆದು ಅಧಿಕಾರ ನಡೆಸಿದ ಕಾಂಗ್ರೆಸ್ ಆ ಸಮುದಾಯದ ಜನರ ಅಭಿವೃದ್ಧಿಗೆ ಮುಂದಾಗಲಿಲ್ಲ. ಅನ್ನಭಾಗ್ಯಕ್ಕೆ 30 ರೂ. ಕೇಂದ್ರ ಹಾಗೂ ರಾಜ್ಯ 3 ರೂ. ಕೊಡುತ್ತದೆ.
ಅಕ್ಕಿ ನರೇಂದ್ರ ಮೋದಿಯವರದ್ದು. ಆದರೆ, ಅಕ್ಕಿ ಚೀಲದ ಮೇಲೆ ಸಿದ್ಧರಾಮಯ್ಯ ಚಿತ್ರ, ಹೇಗಿದೆ ನೋಡಿ ಇವರ ವರಸೆ ಎಂದು ಲೇವಡಿ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಅನ್ನಭಾಗ್ಯ ಅಕ್ಕಿ ಹೆಚ್ಚಳ ಮಾಡಿದರು. ಇವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ಮುನ್ನ ಅಕ್ಕಿ ಇರಲಿಲ್ಲವಾ.? ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನ್ನಭಾಗ್ಯದ ಅಕ್ಕಿ ಜನಸಾಮಾನ್ಯರಿಗೆ ತಲುಪಲಿಲ್ಲ. ದೊಡ್ಡ ದೊಡ್ಡ ರೈಸ್ ಮಿಲ್ ಸೇರಿ ಪಾಲಿಶ್ ಆಗಿ ಬೇರೆಡೆಗೆ ಸಾಗಾಟವಾಯ್ತು ಎಂದು ಆರೋಪಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ 40% ಸರ್ಕಾರ ಎಂದು ನಮ್ಮ ವಿರುದ್ಧ ಆರೋಪ ಮಾಡಿದರು. ಆದರೆ ಒಂದೇ ಒಂದು ಪ್ರಕರಣ ಸಾಬೀತಾಗಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಮಗಾರಿಯೇ ಆಗದೇ ಬಿಲ್ ಪಾವತಿಸಿದ್ಧಾರೆ ಎಂದು ದೂರಿದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದ ಅವರು, ಹಲವು ನಾಯಕರು ಬೇರೆ ಬೇರೆ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ, ಬಿಜೆಪಿಯ ಮತದಾರರು ದೂರವಾಗಿಲ್ಲ. ಮತದಾರರು ಬಿಜೆಪಿ ಜೊತೆ ಇದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ವರುಣದಲ್ಲಿ ಕಮಲ ಅರಳಿಯೇ ಅರಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.
ನಂಜನಗೂಡು ಹೊರವಲಯದ ಗೋಳೂರು ಗ್ರಾಮದ ಬಳಿಯಿಂದ ನಂಜನಗೂಡು ತಾಲ್ಲೂಕು ಪಂಚಾಯ್ತಿ ಕಚೇರಿಯವರೆಗೆ ರೋಡ್ ಶೋ ನಡೆಯಿತು. ಬಳಿಕ ನಂಜನಗೂಡು ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ವಿ ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಮುಖಂಡ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.