ವರುಣಾ- ಕೋಲಾರದಿಂದಲೂ ಸ್ಪರ್ಧೆ: ಸಿದ್ದರಾಮಯ್ಯ

ಮೈಸೂರು. ಮಾ.28- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಕೊನೆಯ ಚುನಾವಣೆಯನ್ನು ಹುಟ್ಟೂರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಆಸೆಯಿದೆ. ಆದರೆ ಕೋಲಾರದಿಂದ ಸ್ಪರ್ದೆ ಮಾಡುವಂತೆ ಈ ಭಾಗದ ಜನರಿಂದ ಒತ್ತಡವಿದೆ. ಹೀಗಾಗಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಎಚ್.ಡಿ .ಕೋಟೆಯಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.
ಸ್ವ ಕ್ಷೇತ್ರ ವರುಣಾದಿಂದ ಸ್ಪರ್ಧಿಸಿ ಗೆದ್ದ ಬಳಿಕವೇ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಹಾಗೆಂದ ಮಾತ್ರಕ್ಕೆ ವರುಣಾ ಅದೃಷ್ಟದ ಕ್ಷೇತ್ರ ಅಥವಾ ಇನ್ನೊಂದು ನತದೃಷ್ಟ ಕ್ಷೇತ್ರವಲ್ಲ. ಈ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಮ್ಮ ಮಗ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ತಮ್ಮ ಕ್ಷೇತ್ರದಲ್ಲೇ ಕೆಲಸ ಮಾಡುತ್ತಾರೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದರು.
ಕಾಂಗ್ರೆಸ್ ಹೈಕಮಾಂಡ್ ಜತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು.