ವರುಣಾರ್ಭಟ ಉತ್ತರಕ್ಕೆ ಕಂಟಕ

ನವದೆಹಲಿ,ಜು.೨೩- ಉತ್ತರ ಭಾರತದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಉತ್ತರ ಭಾರತದಲ್ಲಿ ಕೆಲ ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಆರ್ಭಟ ತೋರಿದೆ. ಭಾರಿ ಮಳೆಗೆ ದೆಹಲಿ, ಉತ್ತರ ಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಮತ್ತೆ ತತ್ತರಿಸಿವೆ. ಮಳೆಯ ರೌದ್ರಾವತಾರದಿಂದ ಹಲವೆಡೆ ಭೂಕುಸಿತ ಸಂಭವಿಸಿದೆ. ಹಲವು ಗ್ರಾಮಗಳು ಜಲಾವೃತಗೊಂಡಿವೆ.
ರಸ್ತೆಗಳು, ಸೇತುವೆಗಳು ನೀರಿನಿಂದ ಮುಳುಗಡೆಯಾಗಿದ್ದು, ಹಲವು ಪ್ರದೇಶಗಳು ಸಂಪರ್ಕ ಕಡಿದು ಹೋಗಿದೆ. ಜನಜೀವನ ಅವ್ತವ್ಯಸ್ತಗೊಂಡಿದ್ದು, ಮಳೆಯಿಂದ ಜನರ ಬದುಕು ಅತಂತ್ರಕ್ಕೆ ಸಿಲುಕಿದೆ.
ಕೆಲ ದಿನಗಳ ಹಿಂದೆ ಭಾರಿ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಹಂತ ದಾಟಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಸಿಕ್ಕಿ ಕೊಂಡಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಚರಣೆ ನಡೆಸಿದೆ.
ದೆಹಲಿ ಮಾತ್ರವಲ್ಲ, ಉತ್ತರ ಕಂಡ, ಉತ್ತರ ಪ್ರದೇಶ, ಹಿಮಾಚಲ, ಗುಜರಾತ್ ಮಹಾರಾಷ್ಟ್ರಗಳಲ್ಲು ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಹಲವು ಮಂದಿ ಮಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ರಾಜ್ಯಗಳಲ್ಲಿ ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ಜಾನುವಾರುಗಳು ಕಣ್ಮರೆಯಾಗಿದ್ದಾರೆ.
ರೆಡ್ ಅಲರ್ಟ್
ಭಾರಿ ಮಳೆಯಿಂದ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹವಾಮಾನ ಇಲಾಖೆ ಈ ರಾಜ್ಯಗಳಿಗೆ ರೆಡ್‌ಅಲರ್ಟ್ ಘೋಷಣೆ ಮಾಡಿದೆ. ಹಾಗೆಯೇ ದೆಹಲಿ, ಉತ್ತರಕಂಡ ಉತ್ತರ ಪ್ರದೇಶಗಳಲ್ಲೂ ಯೆಲ್ಲೋ ಅಲರ್ಟ್‌ನ್ನು ಘೋಷಿಸಲಾಗಿದೆ. ಮೀನಗಾರರಿಗೂ ಜು. ೨೬ರವರೆಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮುಂಬೈನಲ್ಲೂ ಮಳೆ ಅಬ್ಬರ
ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲೂ ಮಳೆ ಅಬ್ಬರಿಸುತ್ತಿದೆ. ಮುಂಬೈನ್ ಅಂಧೇರಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಗುಜರಾತ್‌ನ ಹಲವು ನಗರಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಿಮಾಚಲ ಪ್ರದೇಶದಲ್ಲೂ ಮಳೆ ಅಬ್ಬರಿಸುತ್ತಿದ್ದು, ಇಲ್ಲಿ ಭೂಕುಸಿತ ಹೆಚ್ಚಾಗಿದೆ.
ಉತ್ತರಾಕಾಂಡ್, ಉತ್ತರ ಪ್ರದೇಶದಲ್ಲೂ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮತ್ತೆ ಕಟ್ಟೆಚ್ಚರ ವಹಿಸಲಾಗಿದೆ.
ಕಂದಾಯ ಸಚಿವ ಅತಿಶಿ ಮರ್ಲೆನಾ ಪ್ರತಿಕ್ರಿಯಿಸಿ, ನದಿಯಲ್ಲಿನ ನೀರಿನ ಮಟ್ಟ ೨೦೬.೭ ಮೀಟರ್‌ಗೆ ಏರಿದರೆ ಯಮುನಾ ಖಾದರ್‍ನ ಕೆಲವು ಭಾಗಗಳು ಮುಳುಗಡೆಯಾಗಬಹುದು ಆದರೆ ಸರ್ಕಾರ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಹಿಂಡನ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ನಂತರ ನದಿ ದಡದಲ್ಲಿರುವ ಮನೆಗಳು ಮುಳುಗಿದ ನಂತರ ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ,
ಹಿಮಾಚಲ ಪ್ರದೇಶದ ನ್ನೌರ್ ಮತ್ತು ಶಿಮ್ಲಾದಲ್ಲಿ ರಾಷ್ಟ್ರೀಯ ಹೆದ್ದಾರಿ- ೫ ಅನ್ನು ನಿರ್ಬಂಧಿಸಲಾಗಿದೆ; ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎನ್‌ಎಚ್‌ಎಐ ಹೇಳಿದೆ.
ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಡಾಖ್ ಲೆಫ್ಟಿನೆಂಟ್ ಗವರ್ನರ್ ಬ್ರಿಗೇಡಿಯರ್ (ನಿವೃತ್ತ) ಬಿ ಡಿ ಮಿಶ್ರಾ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಹಠಾತ್ ಪ್ರವಾಹದಿಂದ ಉಂಟಾದ ಹಾನಿ ಪರಿಶೀಲಿಸಿ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದ್ಯುತ್ ಸ್ಥಗಿತ:
ಭಾರೀ ಮಳೆಯಿಂದಾಗಿ ಉತ್ತರಕಾಶಿ ಜಿಲ್ಲೆಯ ಪುರೋಲಾ, ಬರ್ಕೋಟ್ ಮತ್ತು ದುಂಡಾದಲ್ಲಿ ೫೦ ಕಟ್ಟಡಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ೫೦ ರಸ್ತೆಗಳು ಬಂದ್ ಆಗಿವೆ. ಸುಮಾರು ೪೦ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಮತ್ತು ೪೦೦ ಕ್ಕೂ ಹೆಚ್ಚು ಕೃಷಿ ಭೂಮಿಯ ಚರಂಡಿಗಳು ಕೊಚ್ಚಿಹೋಗಿವೆ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಅಭಿಷೇಕ್ ರೋಹಿಲಾ ಹೇಳಿದ್ದಾರೆ

ಉತ್ತರ ಭಾರತದಲ್ಲಿ ಮಳೆ ಅಬ್ಬರಿಸುತ್ತಿರುವಾಗಲೇ ರಾಜ್ಯದಲ್ಲೂ ಮುಂಗಾರು ಮಳೆಯ ಅಬ್ಬರ ಹೆಚ್ಚಿದ್ದು, ಕರಾವಳಿ, ಮಲೆನಾಡು, ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುಂದಿನ ೫ ದಿನಗಳು ಮಳೆ ಮತ್ತಷ್ಟು ಜೋರಾಗಲಿದ್ದು, ಕರಾವಳಿ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಒಳನಾಡಿನಲ್ಲಿ ಕಳೆದ ೩ ದಿನಗಳಿಂದಲೇ ವರುಣ ಅಬ್ಬರಿಸುತ್ತಿದ್ದಾನೆ. ಕರಾವಳಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಆರೆಂಜ್‌ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆಯೇ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆ ಹೇಳಿದೆ.
ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಳಸಾ ತಾಲ್ಲೂಕಿನ ಹೆಬ್ಬಾಳ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಕಳಸಾ ಹೊರನಾಡು ಸಂಪರ್ಕ ಕಡಿದು ಹೋಗಿದೆ. ಭಾರಿ ಮಳೆಯಿಂದ ಹತ್ತಾರು ಹಳ್ಳಿಯ ಜನ ಸಂಪರ್ಕ ಕಳೆದುಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಹುಣಸೇಕೊಪ್ಪ ಪಂಚಾಯತಿ ವ್ಯಾಪ್ತಿಯ ಹನುಮಂತಿಯ ಗಣಪತಿ ಹನುಮಂತ ಗೌಡ ಎಂಬವರ ಮನೆ ಮೇಲೆ ಮರ ಬಿದ್ದಿದೆ. ಮನೆ ಭಾಗಶಃ ಜಖಂಗೊಂಡಿದೆ.ಘಟನೆಯಲ್ಲಿ ಮನೆಯಲ್ಲಿದ್ದ ೧ ತಿಂಗಳು ೫ ದಿವಸದ ಮಗುವಿಗೆ ಗಾಯಗೊಂಡಿದ್ದು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಾಧಿಕಾರಿಗಳು ಮಗುವಿಗೆ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಸಿದ್ದಾರೆ.
ಕುದುರೆ ಮುಖ ಘಟ್ಟ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದ್ದು, ಭದ್ರಾನದಿ ಆಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅದೇ ರೀತಿ ತುಂಗ, ಭದ್ರಾ, ಹೇಮಾವತಿ ನದಿಗಳ ಒಳಹರಿವು ಹೆಚ್ಚಾಗಿದೆ. ಕೊಡಗಿನಲ್ಲೂ ಭಾರಿ ಮಳೆಯಾಗುತ್ತಿದೆ.
ಹಾರಂಗಿ ಬಹುತೇಕ ಭರ್ತಿ ೨೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯದ ೪ ಕ್ರೆಷ್ಟ್ ಗೇಟ್‌ಗಳ ಮೂಲಕ ಕಾವೇರಿ ನದಿಗೆ ನೀರು ಬಿಡಲಾಗಿದೆ. ಶಾಸಕರಾದ ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿ ನೀರು ಬಿಡುಗಡೆಗೆ ಚಾಲನೆ ನೀಡಿದರು. ನದಿಗೆ ನೀರು ಬಿಟ್ಟಿರುವ ಕಾರಣ ನದಿಪಾತ್ರದಲ್ಲಿ ವಾಸಿಸುವ ಜನರು ನೀರಿಗಿಳಿಯದಂತೆ ಎಚ್ಚರಿಕೆ ವಹಿಸಬೇಕು ಅಧಿಕಾರಿಗಳು ಸೂಚಿಸಿದ್ದಾರೆ.
ಕಳೆದ ಒಂದು ವಾರದಿಂದ ಮನೆ, ರಸ್ತೆಗಳಿಗೆ ಹಾನಿಯಾಗಿದ್ದು, ಶಿರಸಿ ತಾಲೂಕೊಂದರಲ್ಲೇ ೪ ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿವೆ, ದಕ್ಷಿಣ ಕನ್ನಡದ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮ್ಯಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.
ಧರ್ಮಸ್ಥಳದಲ್ಲೂ ಮಳೆ
ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲೂ ಮಳೆ ಹೆಚ್ಚಾಗಿದ್ದು, ನೇತ್ರಾವತಿ ನದಿ ಭೋರ್ಗರೆದು ಹರಿಯುತ್ತಿದೆ. ನದಿಗಿಳಿಯದಂತೆ ಯಾತ್ರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನೇತ್ರಾವತಿ ನದಿಯ ಸ್ನಾನಘಟ್ಟ ಮುಳುಗಡೆಯಾಗುವ ಭೀತಿ ಎದುರಾಗಿದೆ.
ಉತ್ತರ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ ೨೭೭ ಮಿ.ಮೀ, ಆಗುಂಬೆಯಲ್ಲಿ ೧೬೩ ಮಿ.ಮೀ ಮಳೆ ಬಿದ್ದಿದೆ. ಕೇರಳದ ವೈನಾಡಿನಲ್ಲೂ ಮಳೆ ಹೆಚ್ಚಿರುವುದರಿಂದ ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ -ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜಲಾವೃತವಾಗಿವೆ.
ಹಾಲಮಟ್ಟಿ ಜಲಾಶಯಕ್ಕೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ೮೩ ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ದೂದ್‌ಗಂಗಾ ತುಂಬಿದ ಪರಿಣಾಮ ಕಾರದಗ ಗ್ರಾಮದ ಬಂಗಾಲಿ ಬಾಬಾ ಮಂದಿರ ಜಲಾವೃತಗೊಂಡಿದೆ. ಬೀದರ್‌ನ ಕತ್ತರ್‌ಗಾಂವ್‌ನ ಸೇತುವೆ ಮುಳುಗಡೆಯಾಗಿದೆ. ಚಿಂಚೋಳಿಯ ಬೆನಕನಹಳ್ಳಿ ಜಲಾವೃತವಾಗಿದೆ. ಕಲಬುರಗಿಯಲ್ಲಿ ೧೫ ಮನೆ ಕುಸಿದಿದೆ. ಯಾದಗಿರಿಯಲ್ಲಿ ಭೀಮಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಸನದ ಶಿರಾಡಿಘಾಟ್‌ನಲ್ಲೂ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಭೂಕುಸಿತ ಉಂಟಾಗಿದೆ. ದೋಣಿಗಲ್ ದರ್ಗಾ ಬಳಿ ರಸ್ತೆ ಕುಸಿಯುತ್ತಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.