ವರುಣಾದಲ್ಲಿ ನೂರಕ್ಕೆ ನೂರು ಸೋಮಣ್ಣ ಗೆಲ್ಲುತ್ತಾರೆ: ಬಿ.ಎಸ್.ಯಡಿಯೂರಪ್ಪ

ಮೈಸೂರು,ಮೇ.3:- ವರುಣಾದಲ್ಲಿ ನೂರಕ್ಕೆ ನೂರು ಸೋಮಣ್ಣನವರು ಗೆಲ್ಲುತ್ತಾರೆ. ಸಿದ್ದರಾಮಯ್ಯನವರು ಮನೆಗೆ ಹೋಗುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ವರುಣಾದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರು. ಅವರ ಉತ್ಸಾಹ, ಹುಮ್ಮಸ್ಸನ್ನು ನೋಡಿದಾಗ ಸಿದ್ದರಾಮಯ್ಯನವರು ಮನೆಗೆ ಹೋಗುವುದು ನಿಶ್ಚಿತ. ವಿ.ಸೋಮಣ್ಣ ವಿಧಾನಸೌಧಕ್ಕೆ ಹೋಗುವುದು ನಿಶ್ಚಿತ. ಈ ರೀತಿಯ ವಾತಾವರಣವನ್ನು ಅವರು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ನೋಡಿ ಬಂದಿದ್ದೇನೆ. ಬಹುಶಃ ಎರಡೂ ಕ್ಷೇತ್ರವನ್ನು ಅವರು ಗೆಲ್ಲಬಹುದು ಅನಿಸತ್ತೆ ಎಂದರು.
ಎಲ್ಲ ಕಡೆ ಸೋಮಣ್ಣ ಪರವಾದ ಅಲೆ ಇದೆ. ರಾಜ್ಯದ ಉದ್ದಗಲ ಪ್ರವಾಸ ಮಾಡಿ ಬಂದಿದ್ದೇನೆ. ಈ ಬಾರಿ ನಾವು 130-135 ಗೆದ್ದು ಸರ್ಕಾರ ಮಾಡುವುದು ನಿಶ್ಚಿತ ಅದಕ್ಕೆ ಜನ ಬೆಂಬಲ ಸಿಗತ್ತೆ. ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ ಅವರು ಹೆಚ್ಚು ಸಮಯ ನೀಡಿ ಓಡಾಡುತ್ತಿರುವುದರಿಂದ ಹೆಚ್ಚು ಶಕ್ತಿ ಬಂದಂತಾಗಿದೆ. ಬಹುಮತದ ಸರ್ಕಾರ ಬರತ್ತೆ. ಯಾರ ಬೆಂಬಲ ಇಲ್ಲದೆನೇ ಸ್ವತಂತ್ರ ಸರ್ಕಾರ ಮಾಡುತ್ತೇವೆ. ಹಿಂದೆ ಸಮ್ಮಿಶ್ರ ಸರ್ಕಾರದಿಂದ ಏನು ಕಷ್ಟ ಅನುಭವಿಸಿದ್ದೇವೆ ಎನ್ನುವುದು ನಿಮಗೂ ಗೊತ್ತು, ನಮಗೂ ಗೊತ್ತಿದೆ. ಆ ರೀತಿಯ ಪರಿಸ್ಥಿತಿಗೆ ಅವಕಾಶ ಮಾಡಿಕೊಡಬಾರದು ಎಂದು ರಾಜ್ಯದ ಜನತೆಯಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದರು.
ಸಿದ್ದರಾಮಯ್ಯ ಪ್ರಚಾರಕ್ಕೆ ಬರಲ್ಲ ಅಂದಿದ್ದರು, ಇವತ್ತು ಮತ್ತೆ ಬರ್ತಾರೆ. ನಾಳೆಯಿಂದ ವರುಣಾದಲ್ಲಿ ಪ್ರಚಾರ ನಡೆಸುತ್ತಾರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರ ಸೋಲು ನಿಶ್ಚಿತ ಎಂದಾಗಿರುವುದರಿಂದ ಅವರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವುದು ಬಿಟ್ಟು ಇಲ್ಲೇ ಇರುತ್ತಾರೆ ಎಂದರೆ ಅವರಿಗೆ ಈಗಾಗಲೇ ಸೋಲಿನ ಅರ್ಥವಾಗಿದೆ. ಅದಕ್ಕೆ ಇಲ್ಲೇ ಇರ್ತಾರೆ. ಅವರು ಇಲ್ಲಿ ಇರಲಿ, ಏನೇ ಮಾಡಲಿ ನಮ್ಮ ಅಭ್ಯರ್ಥಿ ನೂರಕ್ಕೆ ನೂರು ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ನಿಷೇಧ ಮಾಡುತ್ತೇವೆ ಎಂದಿರುವ ಕುರಿತು ಪ್ರತಿಕ್ರಿಯಿಸಿ ವಿನಾಶಕಾಲೇ ವಿಪರೀತ ಬುದ್ಧಿ. ಆ ಮಾತು ಹೇಳಿರುವುದೇ ದೊಡ್ಡ ಹಿನ್ನಡೆಯಾಗಲಿದೆ. ಬಜರಂಗದಳ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಅವಕಾಶ ಕೊಡೋದಿಲ್ಲ. ಅದು ಅವರ ತಿರುಕನ ಕನಸು . ಅಸಾಧ್ಯವಾದದ್ದು. ಯಾರು ಅಧಿಕಾರಕ್ಕೆ ಬರಲ್ಲ ಅವರು ಏನು ಬೇಕಾದರೂ ಭರವಸೆ ಕೊಡಬಹುದು. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.