ವರುಣನ ಆರ್ಭಟಕ್ಕೆ ಜಿಲ್ಲೆಯ ಜನತೆ ತತ್ತರ

ಚಾಮರಾಜನಗರ, ನ.20:- ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ವರುಣಾರ್ಭಟ ಹೆಚ್ಚಾಗಿದ್ದು, ಜನತೆ ತತ್ತರಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಹಾಗೂ ಜಮೀನುಗಳು ನೀರಿನಮಯವಾಗಿದೆ.
ಅದರಲ್ಲೂ ರೈತರ ಜಮೀನುಗಳಲ್ಲಿ ನೀರು ತುಂಬಿ ಫಸಲುಗಳೆಲ್ಲಾ ಹಾಳಾಗಿವೆ. ರೈತರು ವ್ಯವಸಾಯ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ.
ರಸ್ತೆ ರಸ್ತೆಗಳು ಮಳೆಯಿಂದಾಗಿ ಕೆಸರುಮಯವಾಗಿದೆ. ನಗರದ ಹಲವು ಬಡಾವಣೆ ಗಳಲ್ಲಂತೂ ರಸ್ತೆ ಡಾಂಬರೀಕರಣಗೊಳ್ಳದೆ ಮಳೆ ನೀರು ಬಿದ್ದು ರಸ್ತೆ ಯಾವುದು ಗುಂಡಿ ಯಾವುದು ಎಂಬುದೇ ತಿಳಿಯದಂತಾಗಿದೆ.
ಮೊನ್ನೆ ಬಿದ್ದ ಭಾರಿ ಮಳೆಯಿಂದ ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಮಳೆಯ ನೀರು ಗ್ರಾಮದೊಳಗೆ ಹರಿದು ಅವಾಂತರ ಸೃಷ್ಟಿಮಾಡಿದೆ. ಮನೆಗಳು ಕುಸಿದು ಬಿದ್ದಿದೆ.
ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಬೇಸತ್ತಿರುವ ಗ್ರಾಮಸ್ಥರು ಮಳೆಯ ನೀರಿನಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಗ್ರಾಮದ ತೆಂಗು ಮತ್ತು ಬಾಳೆ ತೋಟದೊಳಗೆ ಮಳೆಯ ನೀರು ನುಗ್ಗುತ್ತಿದ್ದು, ಬಾಳೆ ಗಿಡ ತೋಟಗಳು ಮಳೆಯ ನೀರಿನಿಂದ ಜಲಾವೃತಗೊಂಡು, ಬೆಳೆಗಳು ಕೊಳೆತು ನಾಶವಾಗಿ, ರೈತರಿಗೆ ಅಪಾರ ನಷ್ಟವುಂಟಾಗಿದೆ.
ಮಳೆಯ ನೀರಿನಿಂದ ಅನ್ನದಾತರು ಕಂಗಲಾಗಿದ್ದು, ಮಳೆಯ ಅಬ್ಬರ ಅನ್ನದಾತರ ಬದುಕಿಗೆ ಕಿಚ್ಚು ತಂದಂತಿದೆ.
ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಇದಕ್ಕಾಗಿ ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.