ಸೇಡಿನ ರಾಜಕಾರಣಕ್ಕೆ ಬಿಎಸ್‌ವೈ ಕಿಡಿ

ಬೆಂಗಳೂರು, ನ.೯- ಬಿಜೆಪಿ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಸೇಡಿನ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ನಗರದಲ್ಲಿಂದು ಬಿಜೆಪಿ ಬರ ಅಧ್ಯಯನದ ಭಾಗವಾಗಿ ಇಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿಗಳ ವೀಕ್ಷಣೆ ನಡೆಸಿದ ಅವರು ಹೊಸಕೆರೆಹಳ್ಳಿ, ಲಗ್ಗೆರೆ, ಜಾಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ಅನುದಾನ ನೀಡಿಲ್ಲ.ಇದೊಂದು ಸೇಡಿನ ರಾಜಕಾರಣವಾಗಿದ್ದು, ಈ ತಿಂಗಳಿನಲ್ಲಿಯೇ ವಿಧಾನಸೌಧ ಮುಂಭಾಗ ಅಥವಾ ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಈ ಸರ್ಕಾರದ ಆಡಳಿತ ವಿರೋಧಿ ನೀತಿಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.ಅದು ಅಲ್ಲದೆ, ಕೆಲವು ರಸ್ತೆಗಳನ್ನು ನೋಡಿದರೆ ಇದು ಬೆಂಗಳೂರು ನಗರವೂ ಅಥವಾ ಹಳ್ಳಿಯೂ ಎನ್ನುವ ಅನುಮಾನ ಕಾಡುತ್ತಿದೆ. ಕೆಲ ಕಡೆಗಳಲ್ಲಿ ಅನುದಾನ ನೀಡಿದ್ದರೂ, ಕೆಲಸ ಮಾಡಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯಯುಕ್ತಿಕ ದ್ವೇಷ ಬಿಡಬೇಕು ಎಂದು ಅವರು ಹೇಳಿದರು.ಸದ್ಯ ರಾಜ್ಯದೆಲ್ಲೆಡೆ ಎಲ್ಲಾ ಮಾದರಿಯ ಕಾಮಗಾರಿಗಳ ಮಂಜೂರು ಹಾಗೂ ಹಣ ಪಾವತಿಗೆ ಶೇಕಡಾ ೭ರಿಂದ ೭.೫ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದು ಈಗಿನ ಸರ್ಕಾರದ ಮಹಾನ್ ಸಾಧನೆಯಾಗಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಸಾವಿರಾರರು ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.ಇನ್ನೂ ಅಕ್ರಮ ಕಾಮಗಾರಿಗಳು ನಡೆದಿದ್ದಾರೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ.ಆದರೆ, ಉದ್ದೇಶ ಪೂರಕವಾಗಿ ಅನುದಾನ ನಿಲ್ಲಿಸಿ, ಕಾಮಗಾರಿ ನಡೆಯದಂತೆ ನೋಡಿಕೊಳ್ಳುವುದು ಸೇಡಿನ ರಾಜಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಮುನಿರತ್ನ, ಅಶ್ವಥ್ ನಾರಾಯಣ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.