ವರಿಷ್ಠರ ಬುಲಾವ್ ಸೋಮಣ್ಣ ದೆಹಲಿಗೆ

ಬೆಂಗಳೂರು,ಮಾ.೧೫:ವಸತಿ ಸಚಿವ ವಿ. ಸೋಮಣ್ಣ ಅವರು ಪಕ್ಷದ ವರಿಷ್ಠರ ಬುಲಾವ್ ಮೇರೆಗೆ ಇಂದು ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ವರಿಷ್ಠ ನಾಯಕರನ್ನು ಭೇಟಿ ಮಾಡಿ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗುವರು.
ಪಕ್ಷದ ಕೆಲ ನಾಯಕರ ವಿರುದ್ಧ ಮುನಿಸಿಕೊಂಡಿರುವ ಸೋಮಣ್ಣ, ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳಿಗೆ ನಿನ್ನೆ ತೆರೆ ಎಳೆದಿದ್ದ ಸೋಮಣ್ಣ ಅವರು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು, ಅಸಮಾಧಾನೆಗೊಂಡಿರುವ ಸಚಿವ ವಿ. ಸೋಮಣ್ಣ ಅವರ ಮನ ಒಲಿಸಲು ಮುಂದಾಗಿದ್ದು, ದೆಹಲಿಗೆ ಬನ್ನಿ ವರಿಷ್ಠರ ಭೇಟಿ ಮಾಡಿಸುತ್ತೇನೆ ಎಲ್ಲವೂ ಸರಿ ಹೋಗುತ್ತದೆ ಎಂದು ಸಚಿವ ವಿ. ಸೋಮಣ್ಣ ಅವರನ್ನು ಜೋಷಿ ಅವರು ದೆಹಲಿಗೆ ಬರುವಂತೆ ಹೇಳಿದ್ದು, ಅದರಂತೆ ಸಚಿವ ವಿ. ಸೋಮಣ್ಣ ಅವರು ಇಂದು ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದರು.
ಇಂದು ಸಂಜೆ ದೆಹಲಿಯಲ್ಲಿ ಸಚಿವ ವಿ. ಸೋಮಣ್ಣ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರುಗಳನ್ನು ಭೇಟಿ ಮಾಡುವರು.
ಸೋಮಣ್ಣ ಹೇಳಿಕೆ
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ಇಲಾಖೆ ಕೆಲಸದ ಮೇಲೆ ದೆಹಲಿಗೆ ತೆರಳುತ್ತಿದ್ದೇನೆ. ಸಚಿವ ಪ್ರಲ್ಹಾದ್ ಜೋಷಿ ಸೇರಿದಂತೆ ಪಕ್ಷದ ನಾಯಕರುಗಳನ್ನು ಭೇಟಿ ಮಾಡುವುದಾಗಿ ಹೇಳಿದರು.
ಪಕ್ಷ ನನಗೆ ಒಳ್ಳೆ ಅವಕಾಶ ಕೊಟ್ಟಿದೆ. ನಾನು ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಯಾರೊಂದಿಗೆ ಯಾವಾಗ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿದೆ. ನೇರ ರಾಜಕೀಯ ಮಾಡಿಕೊಂಡು ಬಂದವನು. ಯಾರ ಬಳಿಯೂ ಅಂಗಲಾಚಲ್ಲ, ಹಲ್ಲು ಕಿರಿದು ನಿಲ್ಲಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸತ್ಯ ಕಹಿಯಾಗುತ್ತದೆ. ನೇರ ಮಾತುಗಳಿಮದ ಹಿನ್ನಡೆಯಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ದೊಡ್ಡ ನಾಯಕರು, ಅವರ ಬಗ್ಗೆ ನಾನು ಮಾತನಾಡಲ್ಲ, ೧೫ ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಅವರನ್ನೇ ಕೇಳಿ. ಅವರೂ ಸಹ ಪಕ್ಷಕ್ಕೆ ದುಡಿದವರನ್ನು ಚಟುವಟಿಕೆಯಿಂದ ಕೆಲಸ ಮಾಡುವವರನ್ನು ಗಮನಿಸಬೇಕು. ನನಗೆ ಅಧಿಕಾರದ ಮೇಲೆ ವ್ಯಾಮೋಹ ಇಲ್ಲ, ಜನ ಸೇವೆಗೆ ನನ್ನ ಜೀವನ ಅರ್ಪಿಸಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.