ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ

ಬೆಂಗಳೂರು, ನ. ೧೮- ರಾಜಕೀಯ ಪಕ್ಷ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಒಬ್ಬರಿಗೆ ಸ್ಥಾನಮಾನ ಸಿಕ್ಕಾಗ ಸ್ಥಾನಮಾನ ಕೈತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಏನೇ ಆದರೂ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್. ಅಶೋಕ್ ಹೇಳಿದ್ದಾರೆ.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಯಾರು ಬೇಸರಗೊಂಡಿದ್ದಾರೋ ಅವರ ಜತೆ ನಾನೇ ಖುದ್ದು ಮಾತನಾಡುತ್ತೇನೆ. ಯಾರೂ ಕೂಡ ಪಕ್ಷದ ತೀರ್ಮಾನವನ್ನು ವಿರೋಧಿಸಬಾರದು. ಕೆಲವು ಸಂದರ್ಭಗಳಲ್ಲಿ ವೈಯುಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯ ಎಂದರು.ಪಕ್ಷದಲ್ಲಿ ಏನೇ ಅಸಮಾಧಾನ ಇದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುವುದಾಗಿಯೂ ಅವರು ಹೇಳಿದರು.ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಲು ಎಲ್ಲರ ಸಹಕಾರವನ್ನು ಕೋರಿದ್ದೇನೆ. ಸದನದ ಒಳಗೂ, ಹೊರಗೂ ರಚನಾತ್ಮಕ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ. ಎಲ್ಲವನ್ನೂ ವಿರೋಧ ಮಾಡುವುದೇ ವಿರೋಧ ಪಕ್ಷದ ಕೆಲಸವಲ್ಲ ಎಂಬುದು ಗೊತ್ತಿದೆ. ತಪ್ಪು ಮಾಡಿದಾಗ ಸರ್ಕಾರದ ಕಿವಿ ಹಿಂಡುತ್ತೇವೆ. ನಾಡಿನ ಜನರ ಸಮಸ್ಯೆಗಳ ದನಿಯಾಗಿ ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಶೇ. ೬೦ ರಷ್ಟು ಕಮೀಷನ್ ಸರ್ಕಾರ: ಆರೋಪ
ಕಾಂಗ್ರೆಸ್ ಸರ್ಕಾರದಲ್ಲಿ ಈಗಲೂ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಸರ್ಕಾರ ಶೇ. ೬೦ ಪರ್ಸೆಂಟ್ ಕಮೀಷನ್ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ. ಇವರ ವರ್ಗಾವಣೆ ದಂಧೆಯ ದಾಖಲೆಗಳೇ ಬಹಿರಂಗಗೊಂಡಿವೆ. ನನ್ನ ಪ್ರಕಾರ ಇದು ಶೇ. ೬೦ ರಷ್ಟು ಕಮೀಷನ್ ಸರ್ಕಾರ ಎಂದು ದೂರಿದರು.
ವಿಧಾನಸಭೆಯಲ್ಲಿ ಬಿಜೆಪಿಯವರು ಎದ್ದುನಿಂತು ಮುಸ್ಲಿಂ ಸಮುದಾಯಕ್ಕೆ ಸೇರಿರುವ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ನಮಿಸುತ್ತಾರೆ ಎಂಬ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್ ಅವರು, ನಾವು ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡುತ್ತೇವೆ. ಈ ರೀತಿಯ ಮತೀಯ ವಿಚಾರಗಳ ವಿರುದ್ಧ ಹೋರಾಟವೂ ಮಾಡುತ್ತೇವೆ ಎಂದು ಹೇಳಿದರು.ಉತ್ತರ ಕರ್ನಾಟಕ ಭಾಗದಿಂದ ಜಗದೀಶ್‌ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಕರಾವಳಿ ಕರ್ನಾಟಕದಿಂದ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದರು. ಮಧ್ಯಕರ್ನಾಟಕದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಬಿಜೆಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಕ್ಕಿದೆ ಎಂದು ತಮಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿರುವುದನ್ನು ಸಮರ್ಥಿಸಿಕೊಂಡರು.
ಬಿಜೆಪಿಯಲ್ಲಿ ಹೆಚ್ಚು ಮುಖ್ಯಮಂತ್ರಿಯಾಗಿರುವುದು ಉತ್ತರ ಕರ್ನಾಟಕ ಭಾಗದವರೆ. ನಮ್ಮಲ್ಲಿ ಆ ಭೇದ ಭಾವ ಇಲ್ಲ. ಈ ಬಗ್ಗೆ ಅಸಮಾಧಾನಗೊಂಡಿರುವ ನಾಯಕರ ಜತೆ ಮಾತನಾಡಿ ಎಲ್ಲವನ್ನು ಸರಿಪಡಿಸಿಕೊಳ್ಳುವುದಾಗಿಯೂ ಹೇಳಿದರು.