ವರಿಷ್ಠರ ಅಣತಿಯಂತೆ ಸಂಪುಟ ವಿಸ್ತರಣೆ : ಸಿಎಂ

ಬೆಂಗಳೂರು, ಜ. ೯- ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಹೂರ್ತವನ್ನು ಪಕ್ಷದ ವರಿಷ್ಠರೇ ನಿರ್ಧರಿಸಲಿದ್ದಾರೆ. ವರಿಷ್ಠರು ಬಯಸಿದಾಗ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಕೃಷಿ ಸಂಜೀವಿನಿ ಯೋಜನೆಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಅವರು ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಸಂಪುಟ ವಿಸ್ತರಣೆ ಯಾವಾಗ ಆಗಬೇಕು, ಯಾರನ್ನು ಸಚಿವರನ್ನಾಗಿಸಬೇಕು ಎಲ್ಲವೂ ವರಿಷ್ಟರ ತೀರ್ಮಾನಕ್ಕೆ ಬಿಟ್ಟದ್ದು. ಪಕ್ಷದ ಹೈಕಮಾಂಡ್ ಹೇಳಿದಾಗ ಸಂಪುಟ ವಿಸ್ತರಿಸುತ್ತೇನೆ ಎಂದು ಅವರು ಹೇಳಿದರು.
ಕೋವಿಡ್, ಅತಿವೃಷ್ಠಿ, ಅನಾವೃಷ್ಠಿ ಕಾರಣದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಹೋಗಲಿದ್ದು, ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ ಎಂದು ಅವರು ತಿಳಿಸಿದರು.
ವಂಚನೆ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ಬಂಧನದಲ್ಲಿರುವ ವಂಚಕ ಯುವರಾಜ್‌ಗೂ ಬಿಜೆಪಿಗೂ ಸಂಬಂಧ ಇಲ್ಲ. ಬಿಜೆಪಿ ನಾಯಕರು ಅವರ ಜತೆ ಭಾವಚಿತ್ರ ತೆಗೆಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಜತೆ ನಂಟಿದೆ. ನಾಯಕರ ಜತೆ ಬಾಂಧವ್ಯ ಇದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ತನಿಖೆ ನಡೆದಿದೆ. ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವವರು ಎಲ್ಲರ ಜತೆಯಲ್ಲೂ ಭಾವಚಿತ್ರ ತೆಗೆಸಿಕೊಳ್ಳುತ್ತಾರೆ. ಹಾಗೆಂದು ಅವರ ಜತೆ ಅವರಿಗೆ ಬಾಂಧವ್ಯ, ವ್ಯವಹಾರಿಕ ಸಂಬಂಧ ಇದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.