ವರಿಷ್ಠರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ

ಯತ್ನಾಳ್ ಬೇಸರ

ಬೆಳಗಾವಿ, ಡಿ. ೪- ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಉತ್ತರ ಕರ್ನಾಟಕ ಭಾಗದವರಿಗೆ ನೀಡಬೇಕಿತ್ತು. ಪಕ್ಷದ ವರಿಷ್ಠರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕ ಭಾಗದವರಿಗೆ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿರುವ ಬಿಜೆಪಿಯ ಬಂಡಾಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ನಾನು ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ, ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ. ನಾನು ಯಾರಿಗೂ ಅಂಜುವವನಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂಬ ನನ್ನ ನಿಲುವು, ಧೋರಣೆ ಯಾವುದೇ ಕಾರಣಕ್ಕೂ ಬದಲಾಗಲ್ಲ. ಶಾಸಕಾಂಗ ಪಕ್ಷದ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಅವರು ಸೆಡ್ಡು ಹೊಡೆದಿದ್ದಾರೆ.
ಉತ್ತರ ಕರ್ನಾಟಕ ಭಾಗ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇದಕ್ಕೆ ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿ, ನಾನೇ ಚರ್ಚೆಯನ್ನು ಮೊದಲು ಆರಂಭಿಸುತ್ತೇನೆ. ಸುಮ್ಮನೆ ತೌಡು ಕುಟ್ಟುವುದರಲ್ಲಿ ಅರ್ಥವಿಲ್ಲ. ಕಲಾಪದಲ್ಲಿ ಗುಣಮಟ್ಟದ ಚರ್ಚೆಯಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಯತ್ನಾಳ್ ಹೇಳಿದರು.
ಫಲಿತಾಂಶ: ಕುಟುಂಬ ರಾಜಕಾರಣಕ್ಕೆ ಎಚ್ಚರಿಕೆ ಗಂಟೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕುಟುಂಬ ರಾಜಕಾರಣ ಮಾಡುವವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ರಾಜಕಾರಣದಲ್ಲಿ ನಾವೇ ಇರಬೇಕೆಂದು ಪ್ರತಿಪಾದಿಸುವವರಿಗೆ ಮತದಾರರು ಚುನಾವಣೆ ಫಲಿತಾಂಶದ ಮೂಲಕ ಒಂದು ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಟುಂಬ ರಾಜಕಾರಣ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂದು ಅವರು ಹೇಳಿದರು.
ಹಿಂದುತ್ವ ಮತ್ತು ಅಭಿವೃದ್ಧಿ ಪರ ಇರುವವರಿಗೆ ಮತದಾರರ ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ. ದೇಶದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಪರವಾದ ಕೆಲಸಕ್ಕೆ ಮತದಾರ ಜೈ ಎಂದಿದ್ದಾನೆ. ಪ್ರತಿಪಕ್ಷಗಳ ತಂತ್ರ, ಕುತಂತ್ರ ನಡೆದಿಲ್ಲ. ಹಿಂದುತ್ವ ಮತ್ತು ಅಭಿವೃದ್ಧಿ ದೇಶದಲ್ಲಿ ಉಳಿಯಲಿದೆ ಎಂದರು.