ವರಿಷ್ಠರಿಂದ ಅವಮಾನ:ಈಶ್ವರಪ್ಪ ಕಿಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೪:ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಹತಾಶಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗದೆ ಬರಿಗೈಯಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ದೆಹಲಿಗೆ ಕರೆಸಿಕೊಂಡು ಪಕ್ಷದ ವರಿಷ್ಠರು ತಮಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ತಮ್ಮನ್ನು ಭೇಟಿ ಮಾಡದಿರುವುದು ನನಗೆ ವರವಾಗಿದೆ. ಭೇಟಿಯಾಗಿ ಸ್ಪರ್ಧೆ ವಾಪಸ್ ಪಡೆಯಿರಿ ಎಂದಿದ್ದರೆ ತಮಗೆ ಹಿನ್ನಡೆಯಾಗುತ್ತಿತ್ತು, ಈಗ ಪರೋಕ್ಷವಾಗಿ ನೀವು ಸ್ಪರ್ಧೆ ಮಾಡಿ ಎಂಬ ಸಂದೇಶ ಕೊಟ್ಟಂತಾಗಿದೆ ಎಂದರು.
ತಾವು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಮೇಲೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಬೆಂಬಲ ಸೂಚಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿ. ತಾವು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಅವರ ಕೈ ಬಲಪಡಿಸುತ್ತೇನೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ಅಂತ್ಯವಾಗಲಿ ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೆ. ಹೀಗಾಗಿ ತಮಗೆ ಲೋಕಸಭೆಗೆ ಟಿಕೆಟ್ ಸಿಕ್ಕಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ನಿರ್ಧಾರಕ್ಕೆ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ರಾಯಣ್ಣ ಬ್ರಿಗೇಡ್ ಇದ್ದಿದ್ದರೆ ಇವತ್ತು ದೊಡ್ಡ ಮಟ್ಟದ ಶಕ್ತಿಪ್ರದರ್ಶನ ಇರುತ್ತಿತ್ತು ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಬಂಡಾಯ ಕಹಳೆ ಮೊಳಗಿಸಿದ್ದರು. ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಈಶ್ವರಪ್ಪ ನಿನ್ನೆ ದೆಹಲಿಗೆ ತೆರಳಿದ್ದರು. ಆದರೆ, ತಡರಾತ್ರಿ ಈಶ್ವರಪ್ಪರವರನ್ನು ಅಮಿತ್ ಶಾ ಭೇಟಿ ಮಾಡುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ, ಅಮಿತ್ ಶಾ ಈಶ್ವರಪ್ಪರವರ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದುಪಡಿಸಿದ್ದಾರೆ. ಹೀಗಾಗಿ ಅವರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.