ವರವರ ರಾವ್ ರನ್ನು ಆಸ್ಪತ್ರೆಗೆ ಸೇರಿಸಲು ಕೋರ್ಟ್ ಆದೇಶ

ಮುಂಬೈ, ನ 18-ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣ ಕುರಿತಂತೆ ಬಂಧನಕ್ಕೊಳಗಾಗಿರುವ ಖ್ಯಾತ ಕವಿ ಮತ್ತು ಸಾಮಾಜಿಕ ಹೋರಾಟಗಾರ ವರವರ ರಾವ್ ರನ್ನು ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡುವಂತೆ ಬಾಂಬೆ ಹೈಕೋರ್ಟ್ ಇಂದು ನಿರ್ದೇಶನ ನೀಡಿದೆ.
ಈ ಸಂಬಂಧ ಹೈಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಮಹಾರಾಷ್ಟ್ರ ಸರ್ಕಾರ ಬಂದೀಖಾನೆಯಲ್ಲಿ ರುವ ವರವರ ರಾವ್ ಅವರನ್ನು 15 ದಿನಗಳ ಮಟ್ಟಿಗೆ ಆಸ್ಪತ್ರೆಗೆ ಸೇರಿಸಲು ಒಪ್ಪಿಗೆ ಸೂಚಿಸಿದೆ.
81 ವರ್ಷ ವಯಸ್ಸಿನ ವರವರ ಅವರು ಸದ್ಯ ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ. ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಸರ್ಕಾರದ ಪರ ವಕೀಲ ದೀಪಕ್ ಠಾಕ್ರೆ ಕೋರ್ಟಿಗೆ ತಿಳಿಸಿದ್ದಾರೆ.
ರಾವ್ ಅವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಾರದು ಎಂದು ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ.