
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೪:ನಾಳೆ ವರಮಹಾಲಕ್ಷ್ಮಿ ಹಬ್ಬ, ಬೆಲೆ ಏರಿಕೆ ನಡುವೆಯೂ ಲಕ್ಷ್ಮಿಯನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ರಾಜ್ಯದ ಜನ ಸಜ್ಜಾಗಿದ್ದಾರೆ. ಹೂವು, ಹಣ್ಣು, ಪೂಜಾಸಾಮಗ್ರಿ ಹಾಗೂ ತರಕಾರಿ ದರಗಳು ದುಬಾರಿಯಾಗಿವೆ..
ನಾಳೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ನಾಡಿನ ಜನತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಗರದ ಪ್ರಮುಖ ಮಾರುಕಟ್ಟೆಯಾದ ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ ಮಾರುಕಟ್ಟೆಗಳಲ್ಲಿ ಅಪಾರ ಜನಸಂದಣಿ ಕಂಡು ಬಂದಿತು.
ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿ ಮಹಿಳೆಯರಿಗೆ ಬಾಗಿನ ನೀಡುತ್ತಾರೆ. ಈ ಬಾರಿ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮಾರುಕಟ್ಟೆಗೆ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ, ಇದು ಹೂವಿನ ದರ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪ್ರತಿ ಕೆಜಿ ಮಲ್ಲಿಗೆ ಹೂವು ೧ ಸಾವಿರ, ಕನಕಾಂಬರಿ ಪ್ರತಿ ಕೆಜಿಗೆ ೨ ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಸೇವಂತಿಗೆ, ಗುಲಾಬಿ, ಸುಗಂಧರಾಜ ಹೂವು ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಬೆಂಗಳೂರಿಗೆ ಮೈಸೂರು, ಶಿವಮೊಗ್ಗ ಸೇರಿದಂತೆ ಇತರ ನಗರಗಳಿಂದ ಹೂವುಗಳು ಪೂರೈಕೆಯಾಗುತ್ತಿದೆ. ಆದರೆ ಬೆಲೆ ಮಾತ್ರ ಗಗನಕ್ಕೇರಿದೆ. ಗ್ರಾಹಕರು ವರಮಹಾಲಕ್ಷ್ಮಿ ಪೂಜೆಗೆ ಬೇಕಾಗಿರುವ ಬಾಳೆಕಂದು,ಪೂಜಾ ಸಾಮಾಗ್ರಿ, ಹೂವುಗಳ ಭರಾಟೆ ಖರೀದಿಯಲ್ಲಿ ನಿರತರಾಗಿದ್ದಾರೆ.
ತರಕಾರಿಗಳ ಬೆಲೆಯೂ ಗಗನ ಕುಸುಮವಾಗಿದ್ದು, ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.