ವರಮಹಾಲಕ್ಷ್ಮಿ ವ್ರತ: ಮಹಿಳೆಯರಿಗೆ ಅರಿಶಿನ, ಕುಂಕುಮ ಬಳೆ ವಿತರಣೆ ಸರ್ಕಾರದ ಸುತ್ತೋಲೆ

ಬೆಂಗಳೂರು ಆ.1- ಈ ಬಾರಿಯ ವರಮಹಾಲಕ್ಷ್ಮಿ ವ್ರತವನ್ನು ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು ದೇವಸ್ಥಾನಕ್ಕೆ ಆಗಮಿಸುವ ಮಹಿಳೆಯರಿಗೆ ಅರಿಶಿನ ಕುಂಕುಮ‌, ಮತ್ತು ಹರಿಸು ಬಳೆಗಳನ್ನು ನೀಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.ವರಮಹಾಲಕ್ಷ್ಮಿ ಹಬ್ಬದ ದಿನ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ದೇವಾಲಯಗಳಿಗೆ ಆಗಮಿಸುವ ಮಹಿಳೆಯರಿಗೆ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಬೇಕು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ನಿರ್ದೇಶನದ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ.ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಬಹಳ ಮಹತ್ವಪೂರ್ಣವಾದ ಸ್ಥಾನ ನೀಡಿ ಗೌರವಿಸಲಾಗಿದೆ. ಪ್ರತಿ ವರ್ಷ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರಿ ವ್ರತ ಮತ್ತು ನವರಾತ್ರಿಗಳಲ್ಲಿಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯರು ಮನೆಯಲ್ಲಿ ಪೂಜೆ ನೆರವೇರಿಸಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸುವ ಸಂಪ್ರದಾಯವಿದೆ ಎಂದು ತಿಳಿಸಿದ್ದಾರೆ.ಈ ಸಂಪ್ರದಾಯಕ್ಕೆ ಮತ್ತಷ್ಟು ಇಂಬು ನೀಡುವ ಹಾಗೂ ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.ಪ್ರತಿವರ್ಷ ದೀಪಾವಳಿಯ ಸಂಧರ್ಭದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ, ಯುಗಾದಿ ದಿನವನ್ನು ಧಾರ್ಮಿಕ ದಿನ ವಾಗಿ ಆಚರಣೆ ಮಾಡುವ ಸಂಪ್ರದಾಯಕ್ಕೂ ನಾವು ಮುಂದಾಗಿದ್ದೇವೆ. ಈ ಬಾರಿ ಶ್ರೀ ವರಮಹಾಲಕ್ಷ್ಮಿ ವ್ರತದ ದಿನದಂದು ಮಹಿಳೆಯಿರಿಗೆ ವಿಶೇಷ ಗೌರವ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಲಕೋಟೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿರುವ 6 ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮ ವಿತರಿಸಬೇಕು ಎಂದು ದೇವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.