ವರಮಹಾಲಕ್ಷ್ಮಿ ವ್ರತ: ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆ

ಬೀದರ್: ಆ.6:ಜಿಲ್ಲೆಯ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮಿ ವ್ರತ ಆಚರಿಸಲಾಯಿತು. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನಗಳಿಗೆ ಬಂದ ಮಹಿಳೆಯರಿಗೆ ಅರಿಶಿಣ-ಕುಂಕುಮ ಹಾಗೂ ಹಸಿರು ಬಳೆಗಳನ್ನು ವಿತರಿಸಲಾಯಿತು.

ನಗರದ ಹೊರ ವಲಯದಲ್ಲಿರುವ ಝರಣಿ ನರಸಿಂಹ ಗುಹಾದೇಗುಲಕ್ಕೆ ಬಂದಿದ್ದ ಮಹಿಳೆಯರಿಗೆ ಪ್ರವೇಶ ದ್ವಾರದಲ್ಲೇ ಆಡಳಿತಾಧಿಕಾರಿ ಅನಂತರಾವ್ ಕುಲಕುರ್ಣಿ ಮಂಗಳದ್ರವ್ಯ ಹಾಗೂ ಬಳೆ ನೀಡಿ ಗೌರವಿಸಿದರು.

ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರ ದೇವಸ್ಥಾನದಲ್ಲಿ ಅರ್ಚಕರು ಹಾಗೂ ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಆಡಳಿತ ಕಚೇರಿ ಸಿಬ್ಬಂದಿ ಮಹಿಳೆಯರಿಗೆ ಅರಿಶಿಣ ಕುಂಕುಮ ವಿತರಣೆ ಮಾಡಿದರು.

ಲಕೋಟೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿರುವ 6 ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮ ಕೊಡಲಾಯಿತು. ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯರು ಭಕ್ತಿ ಶ್ರದ್ಧೆಯಿಂದ ಅವುಗಳನ್ನು ಸ್ವೀಕರಿಸಿದರು.

ಬೀದರ್ ಹಾಗೂ ಹುಮನಾಬಾದ್‍ನಲ್ಲಿ ಕೆಲವರು ವರಮಹಾಲಕ್ಷ್ಮಿ ಮೂರ್ತಿ ಪೂಜೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ವಿವಾಹಿತ ಮಹಿಳೆಯರನ್ನು ಮನೆಗೆ ಕರೆಸಿ ಸಾಮೂಹಿಕವಾಗಿ ಆರತಿ ಬೆಳಗಿ ಪ್ರಸಾದ ವಿತರಿಸಿದರು.

ವರ ಮಹಾಲಕ್ಷ್ಮಿ ಪೂಜೆ

ಕಮಲನಗರ: ತಾಲ್ಲೂಕಿನ ಖತಗಾಂವ್, ಮದನೂರು, ರಾಂಪುರ, ಡಿಗ್ಗಿ, ಕಮಲನಗರ, ಹೊಳಸಮುದ್ರ, ಮುಧೋಳ (ಬಿ), ಮುರ್ಕಿ, ಠಾಣಾಕುಶನೂರು, ಬಳತ, ಸಂಗಮ, ಸೋನಾಳ, ಡೋಣಗಾಂವ್ ಹಾಗೂ ದಾಬಕಾ ಸೇರಿದಂತೆ ವಿವಿಧೆಡೆ ವರ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನಡೆಯಿತು.

ಲಕ್ಷ್ಮಿದೇವಿ ಮೂರ್ತಿ ಪ್ರತಿಷ್ಠಾಪಿಸಿ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಬಳಿಕ ಪೂಜೆ ಸಲ್ಲಿಸಲಾಯಿತು.

ಮಡಿವಾಳೇಶ್ವರ ಭಜನಾ ಮಂಡಳಿ ಅಧ್ಯಕ್ಷ ಯುವರಾಜ ಚ್ಯಾಂಡೇಶ್ವರೆ, ಹಾವಯ್ಯ ಸ್ವಾಮಿ, ಪಾರಮ್ಮಾ ಚ್ಯಾಂಡೇಶ್ವರೆ, ಸುರೇಖಾ ರಾಜಕುಮಾರ ಬೆಂಬುಳಗೆ, ಬೇಬಾವತಿ ಉಮಾಕಾಂತ, ವಿಜಯಲಕ್ಷ್ಮೀ ಹಾವಯ್ಯ ಮಠಪತಿ, ಪ್ರತಿಮಾ ಪಂಚಾಳ, ಕಲಾವತಿ ಯುವರಾಜ, ಜ್ಯೋತಿ ಹಾಗೂ ವಿದ್ಯಾವತಿ ರಾಂಪುರೆ ಇದ್ದರು.