ವರನಟನ ೯೫ನೇ ಹುಟ್ಟುಹಬ್ಬ ಕುಟುಂಬಸ್ಥರಿಂದ ವಿಶೇಷ ಪೂಜೆ

ಬೆಂಗಳೂರು,ಏ-೨೪- ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ಮಿಂಚಿ, ಕನ್ನಡ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಂಗೊಳಿಸಿದ ವರನಟ. ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ ಕಂಠೀರವ ಸೇರಿ ಅನೇಕ ಬಿರುದು ಪಡೆದ ಸರಸ್ವತಿ ಪುತ್ರ ಡಾ.ರಾಜ್ ಕುಮಾರ್ ಅವರಿಗೆ ಇಂದು ೯೫ನೇ ಜನ್ಮದಿನ.
ಡಾ.ರಾಜ್ ಬದುಕಿದ್ದರೆ ಕೋಟ್ಯಂತರ ಅಭಿಮಾನಿಗಳೊಂದಿಗೆ ಇಂದು ೯೫ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ರಾಜ್‌ಕುಮಾರ್ ಅವರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿದ್ದಾರೆ. ಸದ್ಯ ಅವರು ನೆನಪು ಮಾತ್ರ. ಡಾ. ರಾಜ್ ಅವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.
ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕದಲ್ಲಿ ಕುಟುಂಬದ ಸದಸ್ಯರು, ಅಭಿಮಾನಿಗಳು ಪೂಜೆ ನೆರವೇರಿಸಿ ರಾಜ್‌ರನ್ನು ನೆನದು ಭಾವುಕರಾದರು.ಈ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಕೆಲಸ ಕಾರ್ಯಗಳು ನಡೆದವು.
ಬದುಕಿದ್ದಷ್ಟೂ ದಿನವೂ ಆದರ್ಶದ ನೆಲೆಯಲ್ಲಿಯೇ ಜೀವನ ಸಾಗಿಸಿದ ಸರಳತೆಯ ಸಾಕಾರ ಮೂರ್ತಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದವರು. ಇಂದಿಗೂ ಕನ್ನಡ ಚಿತ್ರರಂಗದ ಮೇರು ನಟರಾಗಿದ್ದಾರೆ.
ಅಪ್ರತಿಮ ಪ್ರತಿಭಾ ಕೌಶಲ್ಯಗಳಿಂದ ಜನಮನಸೂರೆಗೊಂಡಿದ್ದ ಮೇರು ನಟರಾಗಿದ್ದಾರೆ. ಡಾ. ರಾಜ್ ೭೦ ರಿಂದ ೯೦ರ ದಶಕದವರೆಗೂ ರಾಜ್ ಚಿತ್ರಗಳು ಜನರ ಜೀವನಾಡಿ ಎಂಬಂತೆ ಬದುಕಿನ ಎಲ್ಲ ಆಗುಹೋಗುಗಳಲ್ಲಿ ಬೆರೆತು ಹೋದವು. ಪ್ರತೀ ಚಿತ್ರಗಳು ಪ್ರಶಾಂತ ನದಿಯಾಗಿ ಜನರ ಹೃದಯದಲ್ಲಿ ವಿಹರಿಸಿದವು.
ಬಂಗಾರದ ಮನುಷ್ಯ ಚಿತ್ರ ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಯಿತು. ಸಾಮಾಜಿಕ ನೆಲೆಯಲ್ಲಿ ಬರುತ್ತಿದ್ದ ಕಾದಂಬರಿ ಆಧಾರಿತ ಚಿತ್ರಗಳು ತುಂಬು ಕುಟುಂಬದ ಅಸ್ತಿತ್ವ ಮೆರೆಯಲು ನೆರವಾದವು. ಮುಖ್ಯವಾಗಿ ರಾಜಣ್ಣ ಆದರ್ಶದ ಗಣಿ. ಹಾಗಾಗಿ ಅಭಿಮಾನಿ ದೇವರುಗಳ ಉಸಿರಲ್ಲಿ ಉಸಿರಾಗಿ ಬೆರೆತು ಹೋದರು.
ನಾಡಿನ ನೆಲ ಜಲದ ವಿಷಯ ಬಂದಾಗ ಹೋರಾಟದ ಹಾದಿ ಹಿಡಿಯುವ ಮುನ್ನ ಎಲ್ಲರ ಗಮನ ರಾಜ್ ಅವರತ್ತ ನೆಲೆಸುತ್ತಿತ್ತು. ಡಾ. ರಾಜ್ ಹೋರಾಟಕ್ಕೆ ಧುಮುಕುತ್ತಿದ್ದಾರೆ ಎಂದರೆ ಸರ್ಕಾರ ನಡುಗಿ ಹೋಗುತ್ತಿತ್ತು. ಅದರಲ್ಲೂ ನಾಡು ನುಡಿ ಭಾಷೆಯ ಸಂರಕ್ಷಣೆ ವಿಷಯದಲ್ಲಿ ರಾಜ್ ಕುಮಾರ್ ಸದಾ ಮುಂದೆ.
ಯಾವಾಗಲೂ ಜನರಿಂದ ನಾನು ಮೇಲೆ ಬಂದೆ ಎಂದು ವಿನಮ್ರವಾಗಿ ಹೇಳುತ್ತಾ ಬಂದವರು. ಸಂತನಿರಲಿ, ಸಾಧಕನಿರಲಿ, ರಾಜನಿರಲಿ ಮಂತ್ರಿ ಇರಲಿ, ಸಾಮಾನ್ಯ ಕೂಲಿ ಅಥವಾ ಚಾಲಕನೇ ಆಗಿರಲಿ ರಾಜ್ ಕುಮಾರ್ ಪಾತ್ರಕ್ಕೆ ಜೀವ ತುಂಬುತ್ತಿದ್ದ ರೀತಿ ಮಾತ್ರ ವಿಸ್ಮಯ.
ಕಸ್ತೂರಿ ನಿವಾಸ, ಭಕ್ತ ಕುಂಬಾರ, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಬಬ್ರುವಾಹನ ಹೀಗೆ ಅನೇಕ ಚಿತ್ರಗಳಲ್ಲಿ ಅಣ್ಣಾವ್ರಿಗೆ ಅವರೇ ಸಾಟಿ. ಶಂಕರ್ ಗುರು ಚಿತ್ರದ ಮೂರು ಪಾತ್ರ ನಿಭಾಯಿಸಿದ ರೀತಿ ಮಾತ್ರ ಅದ್ಭುತ.
ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ದೇವರಾಗಿ ಬೆರೆತ ಡಾ.ರಾಜ್ ಅಭಿಮಾನಿಗಳನ್ನೇ ದೇವರು ಎಂದು ಕರೆದ ದೇವತಾ ಮನುಷ್ಯ ನಮ್ಮ ನಡುವೆ ಸದಾ ಅಜರಾಮರ.