ವರದಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಸಾರಿಗೆ ಬಸ್ಸುಗಳ ಹಿಂಭಾಗದ ಏಣಿ ತೆರವು

ಸಂಜೆ ವಾಣಿ ಫಲಶೃತಿ

ಅಫಜಲಪುರ:ಜು.26: ದಿ. ಜು. 24 ರಂದು ಸಂಜೆ ವಾಣಿ ಪತ್ರಿಕೆಯಲ್ಲಿ ಸಾರಿಗೆ ಬಸ್ ಮೇಲ್ಛಾವಣಿ ಹತ್ತಿದ ವಿದ್ಯಾರ್ಥಿಗಳು ಎಂಬ ಶೀರ್ಷಿಕೆ ಅಡಿಯಲ್ಲಿ
ಪ್ರಕಟವಾದ ವರದಿ ಹಿನ್ನೆಲೆ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಬಹುತೇಕ ಬಸ್ಸುಗಳ ಹಿಂಭಾಗದ ಏಣಿಯನ್ನು ಜು. 25 ರ ಮಂಗಳವಾರದಂದು ತೆರವುಗೊಳಿಸಿದ್ದಾರೆ.

ಈ ಕುರಿತು ಅಫಜಲಪುರ ಘಟಕ ವ್ಯವಸ್ಥಾಪಕ ಎ.ವಿ ಬೋವಿ ಅವರು ಪ್ರತಿಕ್ರಿಯೆ ನೀಡುತ್ತಾ, ಬಸ್ ಚಾಲಕ ಮತ್ತು ನಿರ್ವಾಹಕರ ಮಾತನ್ನು ಕೇಳದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಒತ್ತಾಯದಿಂದ ಬಸ್ ಮೇಲ್ಛಾವಣಿ ಹತ್ತಿದ್ದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಬಸ್ ಘಟಕದಲ್ಲಿರುವ ಎಲ್ಲಾ ಬಸ್ಸುಗಳ ಹಿಂಭಾಗದ ಏಣಿಯನ್ನು ತೆರವುಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ ಹಾಗೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ ಓಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.