ವರದಕ್ಷಿಣೆ ಕಿರುಕುಳ; ನೊಂದ ತಾಯಿ ಮಗನ ಜೊತೆ ಆತ್ಮಹತ್ಯೆ

ಕೋಲಾರ, ಡಿ.5-ಪತಿ‌ ಮತ್ತವರ ಮನೆಯವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ನೊಂದ ತಾಯಿ ಮಗುವನ್ನು ನೀರಿನ ಸಂಪಿಗೆ ತಳ್ಳಿ ಕೊಂದು‌ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮುಳಬಾಗಲು ತಾಲ್ಲೂಕಿನಲ್ಲಿ ನಡೆದಿದೆ.
ಮುಳಬಾಗಲು ತಾಲ್ಲೂಕಿನ ಪಿಚ್ಚಗುಂಟ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ತಮ್ಮನಹಳ್ಳಿ ಗ್ರಾಮದ ಚೈತ್ರಾ(25) ಹಾಗೂ ಚಾರ್ವಿತ್ ಗೌಡ(3) ಮೃತರು.
ಮೃತಳನ್ನು ಕೋಲಾರ ತಾಲ್ಲೂಕಿನ ವೇಮಗಲ್ ಬಳಿಯ ಪುರಹಳ್ಳಿ ಗ್ರಾಮದ ಶ್ರೀನಾಥ್ ಗೆ 2018ರಲ್ಲಿ ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ದೇವಾಲಯದಲ್ಲಿ ಮದುವೆ ಮಾಡಿಕೊಡಲಾಗಿತ್ತು.
ಶ್ರೀನಾಥ್ ಅವರನ್ನು ಮದುವೆ ಆದಾಗಿನಿಂದಲೂ ಶ್ರೀನಾಥ ತಂದೆ ವೆಂಕಟೇಶಪ್ಪ, ತಾಯಿ ವೆಂಕಟ ಲಕ್ಷ್ಮಮ್ಮ, ಗಂಡನ ತಂಗಿ ಹರ್ಷಿತಾ, ಗಂಡನ ತಮ್ಮ ಶ್ರೀಧರ್ ಎಲ್ಲರೂ ಸೇರಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ಹಿಂಸಿಸುತ್ತಿದ್ದರು. ಇದರಿಂದ ಬೇಸತ್ತ ಚೈತ್ರಾ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಕ್ಷಿಣೆ ಸಮಸ್ಯೆಯನ್ನು ಪರಿಹರಿಸಲು ಮೂರು ಬಾರಿ ನ್ಯಾಯ ಪಂಚಾಯತಿಗಳೂ ನಡೆದಿತ್ತು. ಆದರೂ ಪ್ರಯೋಜನವಾಗದೇ ಇದು ಈ ರೀತಿಯೇ ಮುಂದುವರೆದಿತ್ತು ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಚೈತ್ರಾ ತನ್ನ ಸಾವಿಗೆ ಕಾರಣರಾದವರ ಹೆಸರನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂದು ಪೋಷಕರು ಪ್ರಕರಣದ ಕುರಿತು ತಿಳಿಸಿದ್ದಾರೆ. ಸ್ಥಳಕ್ಕೆ ಮುಳಬಾಗಲು ಡಿ.ವೈ.ಎಸ್.ಪಿ ಗಿರಿ ಭೇಟಿ ನೀಡಿ ಪರಿಶೀಲಿಸಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ