ವರದಕ್ಷಿಣೆ ಕಿರುಕುಳ ಆರೋಪ : ಮಹಿಳೆ ಆತ್ಮಹತ್ಯೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.07: ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಶಾಲೆ ಶಿಕ್ಷಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿಗೆ ಕಾರಣರಾದ ಗಂಡ ಹಾಗೂ ಮನೆಯವರ ಬಂಧನಕ್ಕೆ ಆಗ್ರಹಿಸಿ ಕುಟುಂಬದ ಸದಸ್ಯರು ಪೊಲೀಸ್ ಠಾಣೆ ಬಳಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ರೂಪ (ಬಸಮ್ಮ) (34) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಮ್ಮದೇ ಸ್ವಂತ ಶಾಲೆಗೆ ತೆರಳಿ ವಿಷ ಸೇವಿಸಿ ಆತ್ಮೆಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ‘ನನ್ನ ಗಂಡನನ್ನು ಬಿಟ್ಟು ಬದುಕುವ ಶಕ್ತಿ ನನಗೆ ಇಲ್ಲ. ನನ್ನೊಂದಿಗೆ ಜೀವನ ಮುನ್ನೆಡೆಸಲು ಆತ ಇಷ್ಟಪಡದ ಕಾರಣ ಆತ್ಮಹತ್ಯೆಗೆ ಮುಂದಾಗಿದ್ದೇನೆ’ ಎಂದು ಬರೆದಿದ್ದಾಳೆ.
ಮೃತಳ ತಾಯಿ ಪುಷ್ಪಾವತಿ ನೀಡಿರುವ ದೂರಿನ ಮೇರೆಗೆ ಆಕೆಯ ಪತಿ ಅರ್ಜುನ ಪರಶೆಟ್ಟಿ ಹಾಗೂ ಇತರೆ ಐದು ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಕಲಹ ಉಂಟಾಗಿತ್ತು. ಈ ನಡುವೆ ಪತಿ ವಿಚ್ಛೇದನಕ್ಕೆ ಮುಂದಾಗಿದ್ದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆರೋಪಿತರನ್ನು ಶೀಘ್ರವಾಗಿ ಬಂಧಿಸಿ ಮಗಳ ಸಾವಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಮೃತಳ ಸಂಬಂಧಿಕರು ಶವದೊಂದಿಗೆ ಪೊಲೀಸ್ ಠಾಣೆ ಬಳಿ ಬಂದು ಕೆಲಕಾಲ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮೃತಳ ಸಹೋದರ ಬಸೆಟ್ಟಿ ಪ್ರಕಾಶ್ ಮಾತನಾಡಿ, ಗಂಡನ ಮನೆಯವರ ಕಿರುಕುಳಕ್ಕೆ ಅಮಾಯಕ ಜೀವ ಬಲಿಯಾಗಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಿಎಸ್‍ಐ ಸಂತೋಷ ಡಬ್ಬಿನ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದೇವೆ. ತನಿಖೆ ಚುರುಕುಗೊಳಿಸಲು ನೀವು ಸಹಕಾರ ನೀಡಿ ಎಂದು ಮನವಿ ಮಾಡಿದ ನಂತರ ಕುಟುಂಬದ ಸದಸ್ಯರು ಶವವನ್ನು ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದರು.