ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಕಲಬುರಗಿ.ಏ.5: ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ನವ ವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿಯ ಮನೆಯವರೇ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ತವರು ಮನೆಯವರು ಆರೋಪಿಸಿದ್ದಾರೆ.
ಮೃತಳನ್ನು ಹೊನ್ನಕಿರಣಗಿ ಗ್ರಾಮದ ನಿವಾಸಿ ಮಹಾನಂದಾ ಗಂಡ ರಾಜೀವ್ ಎಂದು ಗುರುತಿಸಲಾಗಿದೆ. ಜೇವರ್ಗಿ ತಾಲ್ಲೂಕಿನ ಮಹಾನಂದಾಳಿಗೆ ಕಳೆದ ವರ್ಷದ ಏಪ್ರಿಲ್ 20ರಂದು ಹೊನ್ನಕಿರಣಗಿಯ ರಾಜು ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಒಳಗಿನ ಸಂಬಂಧವೇ ಆಗಿತ್ತು. ಆದಾಗ್ಯೂ, ಮದುವೆಯಾದ ನಂತರ ಪತಿ, ಮಾವ, ಅತ್ತೆ ಮುಂತಾದವರು ನೀನು ಒಳಗಿನ ಸಂಬಂಧ ಆಗಿದ್ದರಿಂದ ನಮಗೆ ಇನ್ನೂ ಹೆಚ್ಚಿನ ಹಣ ಹಾಗೂ ಬಂಗಾರ ಸಿಕ್ಕಿಲ್ಲ. ಇನ್ನೂ ಹೆಚ್ಚಿನ ಬಂಗಾರ ಹಾಗೂ ಹಣ ತೆಗೆದುಕೊಂಡು ಬಾ ಎಂದು ನಿತ್ಯ ಪೀಡಿಸುತ್ತಿದ್ದರಂತೆ. ಊಟಕ್ಕೂ ಸಹ ಹಾಕದೇ ಕಿರುಕುಳ ಕೊಡುತ್ತಿದ್ದರೆಂದು ಮಹಿಳೆಯ ತಾಯಿ ಹೇಳಿದರು.
ತನ್ನ ಪುತ್ರಿ ಪತಿಯ ಮನೆಯವರ ಕಿರುಕುಳದ ಕುರಿತು ಹೇಳಿದಾಗ ನಾವು ಮನೆಯವರು ಹೋಗಿ ಪಂಚರ ಮುಂದೆ ಹೇಳಿದಾಗ ಅವರು ಕರೆದು ಬುದ್ದಿವಾದ ಹೇಳಿದರು. ಆದಾಗ್ಯೂ, ಕಿರುಕುಳ ಕೊಡುವುದನ್ನು ನಿಲ್ಲಿಸಲಿಲ್ಲ. ಮಾವ ಹಾಗೂ ಆಕೆಯ ಸಣ್ಣ ಮಾವ ಇಬ್ಬರೂ ಮತ್ತಷ್ಟು ಕಿರುಕುಳ ಕೊಡಲಾರಂಭಿಸಿದರು ಎಂದು ಅವರು ದೂರಿದರು.
ನಿನ್ನೆ ದೂರವಾಣಿ ಕರೆ ಬಂದು ಮಹಾನಂದಾ ಕ್ರಿಮಿನಾಶಕ ಕುಡಿದಿದ್ದಾಳೆ. ಆಕೆಯನ್ನು ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದರು. ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ಹೋದಾಗ ಆಕೆ ಅಸುನೀಗಿದ್ದಳು. ಬಾಯಿಯಲ್ಲಿ ಯಾವುದೇ ರೀತಿಯಲ್ಲಿ ವಿಷ ಇರಲಿಲ್ಲ. ಬದಲಾಗಿ ಆಕೆಯ ಕುತ್ತಿಗೆಯನ್ನು ಹಿಚುಕಿ ಕೊಂದಿರುವ ಲಕ್ಷಣಗಳಿವೆ ಎಂದು ಅವರು ಆರೋಪಿಸಿದರು.
ಮಹಾನಂದಾ ಮೂರು ತಿಂಗಳು ಗರ್ಭಿಣಿ ಇದ್ದಳು. ಮಗು ಹೊಟ್ಟೆಯಲ್ಲಿ ಚೆನ್ನಾಗಿ ಬೆಳೆದಿಲ್ಲ ಎಂದು ಪತಿಯ ಮನೆಯವರೇ ತೆಗೆಸಿದ್ದರು ಎಂದು ಅವರು ತಿಳಿಸಿದರು. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.