ವರದಕ್ಷಿಣೆಗಾಗಿ ಮಹಿಳೆ ಮೇಲೆ ಹಲ್ಲೆ: ಪತಿ ಸೇರಿ ಐವರಿಗೆ ಜೈಲು ಶಿಕ್ಷೆ

ಕಲಬುರಗಿ:ಏ.01:ಹೆಚ್ಚುವರಿ ವರದಕ್ಷಿಣೆ ತೆಗೆದುಕೊಂಡು ಬರಬೇಕೆಂದು ಒತ್ತಾಯಿಸಿ ವಿವಾಹಿತ ಮಹಿಳೆಯೊಬ್ಬಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಸೇರಿ ಎಲ್ಲ ಐವರು ಆರೋಪಿಗಳಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ವಿಶೇಷ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ತೀರ್ಪು ನೀಡಿದ್ದಾರೆ.
ನಗರದ ಸಂತ್ರಸವಾಡಿಯ ದರ್ಶನಾಪೂರ್ ಲೇಔಟ್ ನಿವಾಸಿಗಳಾದ ಚಂದ್ರಕಾಂತ್ ತಂದೆ ಚಂದುಲಾಲ್ ತಟರಾಸಿ (31), ಚಂದುಲಾಲ್ ತಂದೆ ಮೋನಪ್ಪ ತಟರಾಸಿ (69), ವೆಂಕಟೇಶ್ ತಂದೆ ಚಂದುಲಾಲ್ ತಟರಾಸಿ (29), ನವೀನ್ ತಂದೆ ಚಂದುಲಾಲ್ ತಟರಾಸಿ (25), ಚೇತನ್ ತಂದೆ ಚಂದುಲಾಲ್ ತಟರಾಸಿ (28), ವಾಸುದೇವ್ ತಂದೆ ಚಂದುಲಾಲ್ ತಟರಾಸಿ (38) ಎಂಬುವವರೇ ಶಿಕ್ಷೆಗೆ ಒಳಗಾದ ಆರೋಪಿಗಳು. ಶಿಕ್ಷೆಗೆ ಒಳಗಾದವರಲ್ಲಿ ಮೂವರು ವ್ಯಾಪಾರಿಗಳು ಹಾಗೂ ಮೂವರು ವಿದ್ಯಾರ್ಥಿಗಳೂ ಸೇರಿದ್ದಾರೆ.
ಕಳೆದ 2016ರ ಫೆಬ್ರವರಿ 25ರಂದು ಚಂದ್ರಕಾಂತನೊಂದಿಗೆ ಮಹಿಳೆಯ ಮದುವೆ ಆಗಿತ್ತು. ಮದುವೆಯ ಕಾಲಕ್ಕೆ ತವರು ಮನೆಯವರು ಐದು ತೊಲೆ ಬಂಗಾರ, 51,000ರೂ.ಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ಕೊಟ್ಟಿದ್ದರು. ಮದುವೆಯಾದ ನಾಲ್ಕೈದು ತಿಂಗಳಿನ ನಂತರ ಪತಿಯ ಮನೆಯವರು ಮಹಿಳೆಗೆ ತವರು ಮನೆಯಿಂದ 2 ಲಕ್ಷ ರೂ.ಗಳು ಹಾಗೂ ಹತ್ತು ತೊಲೆ ಬಂಗಾರ ತರುವಂತೆ ಪೀಡಿಸಲಾರಂಭಿಸಿದರು. ವಿಷಯವನ್ನು ಮಹಿಳೆ ತವರಿಗೆ ತಿಳಿಸಿದಾಗ ಅವರು ಸಹ ಬುದ್ದಿವಾದ ಹೇಳಿದ್ದರು. ಮಹಿಳೆ ಗರ್ಭಿಣಿ ಆಗಿದ್ದು, ಹೆರಿಗೆಗಾಗಿ ತವರಿಗೆ ಕಳಿಸಿಕೊಟ್ಟರು. ನಂತರ ಹೆಣ್ಣು ಮಗು ಜನಿಸಿದ್ದು, ಪತಿಯ ಮನೆಯವರು ಕರೆದುಕೊಂಡು ಹೋಗಿರಲಿಲ್ಲ. 2017ರ ಡಿಸೆಂಬರ್ 15ರಂದು ಮಹಿಳೆಯನ್ನು ತಂದೆ, ತಾಯಿ ಪತಿಯ ಮನೆಗೆ ಕರೆದುಕೊಂಡು ಹೋದಾಗ ಮಹಿಳೆಗೆ ಎಳೆದಾಡಿ, ಹೊಡೆಬಡೆ ಮಾಡಿ ದೈಹಿಕ ಹಿಂಸೆ ನೀಡಿದರು. ಪತಿಯು ಕುತ್ತಿಗೆಯನ್ನು ಹಿಚುಕಿ ಕೊಲೆಗೆ ಯತ್ನಿಸಿದ. ಕೂಡಲೇ ತಂದೆ, ತಾಯಿ ತಮ್ಮ ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಕುರಿತು ನೊಂದ ಮಹಿಳೆಯು ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೊಂಡ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲ ಏಳೂ ಜನರಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 3000ರೂ.ಗಳ ದಂಡ ವಿಧಿಸಿದರು. ದಂಡದ ಮೊತ್ತ ಭರಿಸದೇ ಇದ್ದಲ್ಲಿ ಮತ್ತೆ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿದರು.
ಪ್ರಕರಣದಲ್ಲಿನ ಮೂರನೇ ಆರೋಪಿ ಅಪರ್ಣಾ ತಂದೆ ಚಂದುಲಾಲ್ ತಟರಾಸಿ, ಹಾಗೂ ಯಲ್ಲಮ್ಮ ಗಂಡ ವಾಸುದೇವ್ ತಟರಾಸಿ ಅವರು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಸಾಕ್ಷ್ಯಾಧಾರಗಳು ಕಂಡುಬಂದಿಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡಿದ್ದು, ದಂಡದಿಂದ ಬಂದ ಹಣದಲ್ಲಿ ನೊಂದ ಮಹಿಳೆಗೆ ಹಾಗೂ ಆಕೆಯ ಪುತ್ರಿಗೆ 20000ರೂ.ಗಳನ್ನು ನೀಡಲು ನ್ಯಾಯಾಧೀಶರು ಆದೇಶಿಸಿದರು. ಸರ್ಕಾರದ ಪರವಾಗಿ 1ನೇ ಅಪರ ಸರ್ಕಾರಿ ಅಭಿಯೋಜಕ ಎಸ್,ಆರ್. ನರಸಿಂಹಲು ಅವರು ವಾದ ಮಂಡಿಸಿದರು.