ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

ಕೋಲಾರ,ಅ.೨- ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿಯಲ್ಲಿ ವೃತ್ತಿ ಶಿಕ್ಷಕರಾಗಿದ್ದು ನಿವೃತ್ತರಾದ ಎನ್.ಜಿ.ನಾರಾಯಣಗೌಡ ಅವರನ್ನು ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆಂಜನೇಯ, ಸರ್ಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಿ ಸುಂದರ ಪರಿಸರ ನಿರ್ಮಾಣದಲ್ಲಿ ವೃತ್ತಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿ,
೩೦ ವರ್ಷಗಳಿಗೂ ಹೆಚ್ಚು ಕಾಲ ಪ್ರೌಢಶಾಲಾ ವೃತ್ತಿಶಿಕ್ಷಕರಾಗಿದ್ದು, ಹಲವಾರು ಶಾಲೆಗಳಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಶಾಲೆಗಳ ಪರಿಸರ ರಕ್ಷಣೆ,ಸೌಂದರ್ಯಿಕರಣಕ್ಕೆ ತಮ್ಮದೇ ಕೊಡುಗೆ ನೀಡಿರುವ ನಾರಯಣಗೌಡರು ಇದೀಗ ವಯೋ ಸಹಜ ನಿವೃತ್ತಿ ಹೊಂದುತ್ತಿದ್ದರೂ, ಅವರು ಕೆಲಸ ಮಾಡಿದ ಶಾಲೆಗಳಲ್ಲಿ ಬೆಳೆದು ನಿಂತಿರುವ ಗಿಡಮರಗಳು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿ ನಿಂತಿವೆ ಎಂದರು.
ಸಂಘದ ಖಜಾಂಚಿ ಟಿ.ಎ.ಪ್ರಕಾಶ ಬಾಬು ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಸಾಮಾನ್ಯವಾದರೂ, ಕರ್ತವ್ಯ ಸಲ್ಲಿಸಿದ ವೇಳೆಯಲ್ಲಿ ಮಾಡಿದ ಉತ್ತಮ ಕೆಲಸ, ನಿಷ್ಟೆ ನಮ್ಮ ಜೀವನದುದ್ದಕ್ಕೂ ಸ್ಮರಿಸುವಂತೆ ಮಾಡುತ್ತದೆ, ವೆಂಕಟೇಶಪ್ಪ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಜಿಲ್ಲೆಯ ಎಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರನ್ನು ಒಂದು ಕಡೆ ಸೇರಿಸಿ ಸಂಘಟನೆಯನ್ನು ಬಲಪಡಿಸಿದ್ದರ ಜತೆಗೆ ಶಾಲೆಗಳಲ್ಲಿ ವೃತ್ತಿ ಶಿಕ್ಷಣ ಬೋಧನೆಗೆ ಹೆಚ್ಚಿನ ಮಹತ್ವ ಬರುವಂತೆ ಮಾಡುವಲ್ಲಿ ಸಂಘ ಶ್ರಮಿಸುತ್ತಿದೆ ಎಂದರು.
ಬೀಳ್ಕೊಡುಗೆ,ಸನ್ಮಾನ ಸ್ವೀಕರಿಸಿದ ನಾರಾಯಣಗೌಡ ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಹಲವಾರು ಶಾಲೆಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿದ ಆತ್ಮತೃಪ್ತಿ ಇದೆ, ನಾನು ನಿವೃತ್ತನಾದರೂ ಆ ಶಾಲೆಗೆ ಹೋದಾಗ ಅಲ್ಲಿನ ಗಿಡಮರಗಳನ್ನು ನೋಡಿದಾಗ ಸಂತಸವಾಗುತ್ತದೆ ಎಂದು ತಿಳಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಚಲಪತಿ, ಮುರಳಿ,ವೆಂಕಟೇಶಬಾಬು, ಶಾಂತಮ್ಮ, ಲಕ್ಷ್ಮಿಸಾಗರದ ಚೌಡಮ್ಮ, ನಂಬಿಹಳ್ಳಿ ಚೌಡಮ್ಮ, ಅಮರನಾಥ್, ನಾಗರಾಜ್ ಮತ್ತಿತರರು ಹಾಜರಿದ್ದು ಶುಭ ಕೋರಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿಯಲ್ಲಿ ವೃತ್ತಿ ಶಿಕ್ಷಕರಾಗಿದ್ದು ನಿವೃತ್ತರಾದ ಎನ್.ಜಿ.ನಾರಾಯಣಗೌಡ ಅವರನ್ನು ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.