ವಯಸ್ಸಿನ ಕಾರಣ ಅಧಿಕಾರ ಸ್ವೀಕರಿಸುವುದಿಲ್ಲ: ಶಾಸಕ ಎಂ.ವೈ

ಅಫಜಲಪುರ:ಮಾ.16: ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ವರಿಷ್ಠರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರನ್ನಾಗಿ ಅಫಜಲಪುರ ವಿಧಾನಸಭಾ ಮತಕ್ಷೇತ್ರದ ಶಾಸಕರಾಗಿರುವ ಎಂ.ವೈ.ಪಾಟೀಲ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದಾರೆ. 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಂ.ವೈ. ಪಾಟೀಲರು ಇದೇ ಮೊದಲ ಬಾರಿಗೆ ನಿಗಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಗಮನಕ್ಕೆ ಇಲ್ಲದೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಈ ವಿಷಯದ ಕುರಿತು ಪಕ್ಷದ ವರಿಷ್ಠರು ನನ್ನ ಜೊತೆ ಚರ್ಚಿಸಿದಾಗ ಇಲ್ಲ ನನಗೆ ವಯಸ್ಸಾಗಿದೆ. ಹೀಗಾಗಿ ಎಲ್ಲ ಕಡೆ ಸಂಚರಿಸಲು ಸಾಧ್ಯವಾಗುವುದಿಲ್ಲ. ನನ್ನ ಹೊರತಾಗಿ ಸುಪುತ್ರ ಅರುಣಕುಮಾರ ಪಾಟೀಲ್ ಅಥವಾ ನಾನು ಸೂಚಿಸುವ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿ ಎಂದು ತಿಳಿಸಿದ್ದೆ. ಆದರೂ ಸಹ ನನ್ನನ್ನೇ ನೇಮಕ ಮಾಡಿದ್ದಾರೆ. ನನ್ನನ್ನು ಗುರುತಿಸಿದ್ದಕ್ಕೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರಿಗೆ ತುಂಬು ಹೃದಯದಿಂದ ಧನ್ಯವಾದಗಳು ಸಲ್ಲಿಸುತ್ತೇನೆ. ಆದರೆ ಈ ಅಧಿಕಾರವನ್ನು ನಾನು ವಹಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.