ವಯನಾಡ್‌ಗೆ ರಾಹುಲ್ ಗಾಂಧಿ ಭೇಟಿ

ವಯನಾಡ್,ಏ.೧೧- ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಕೇರಳದ ತಮ್ಮ ಹಿಂದಿನ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇಂದು ಭೇಟಿ ನೀಡಲಿದ್ದಾರೆ. ಇಲ್ಲಿನ ಕ್ಷೇತ್ರದ ಕಾಂಗ್ರೆಸ್ ನಾಯಕರು ರಾಹುಲ್ ಭೇಟಿಗಾಗಿ ಭರ್ಜರಿ ವ್ಯವಸ್ಥೆಯನ್ನು ಮಾಡಿದ್ದಾರೆ. ರಾಹುಲ್ ಗಾಂಧಿಯವರು ಯೋಜನೆ ಪ್ರಕಾರ ವಯನಾಡ್ ಕ್ಷೇತ್ರಕ್ಕೆ ಆಗಮಿಸಿದ ನಂತರ ವಯನಾಡ್ ಜಿಲ್ಲೆಯ ಕೇಂದ್ರವಾದ ಕಲ್ಪೆಟ್ಟಾ ಪಟ್ಟಣದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ಮಾರ್ಚ್ ೨೩ ರಿಂದ ರಾಹುಲ್ ಗಾಂಧಿಯವರು ಲೋಕಸಭೆಯ ಸಂಸದರಾಗಿ ಅನರ್ಹಗೊಂಡಾಗಿನಿಂದ ಕೇಂದ್ರದ ಆಡಳಿತ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ತಮ್ಮ ಟೀಕಾ ದಾಳಿಯನ್ನು ನಡೆಸುತ್ತಿದ್ದಾರೆ. ಇದಲ್ಲದೇ ಕಾಂಗ್ರೆಸ್ ನಾಯಕ ಈಗ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿಯೊಂದಿಗಿನ ಸಂಬಂಧಗಳ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿಯವರು, ೨೦೧೯ ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪನಾಮ ಮಾನನಷ್ಟ ಮಾಡಿದ್ದರಿಂದ, ೨೦೨೩ರ ಮಾರ್ಚ್‌ರಂದು ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಇದರಿಂದ ರಾಹುಲ್ ಗಾಂಧಿಯವರು ಸಂಸತ್ತಿನಿಂದ ಅನರ್ಹಗೊಂಡರು. ಇದಾದ ಮೇಲೆ ಪಕ್ಷ ವಿಪಕ್ಷಗಳ ನಡುವೆ ಟೀಕಾ ಪ್ರಹಾರ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುವುದನ್ನು ನಿಲ್ಲಿಸಿದ್ದಾರೆ. ವಯನಾಡ್ ಕ್ಷೇತ್ರ ಕೇರಳದ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.