ವಯನಾಡು ಕ್ಷೇತ್ರಕ್ಕೆ ರಾಹುಲ್ ರಾಜೀನಾಮೆ: ಪ್ರಿಯಾಂಕ ಗಾಂಧಿ ಸ್ಪರ್ಧೆ

ನವದೆಹಲಿ, ಜೂ.17-ವಯನಾಡು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ವಯನಾಡು ಕ್ಷೇತ್ರದಿಂದ ಪ್ರಿಯಾಂಕಾಗಾಂಧಿ ವಯನಾಡಿನಿಂದ ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿಯಲು ವೇದಿಕೆ ಸಿದ್ದಗೊಂಡಿದೆ. ಇದರೊಂದಿಗೆ ಈ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಎತಡೂ ಕ್ಷೇತ್ರಗಳಲ್ಲಿ ರಾಹುಲ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಸರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದರು. “ರಾಹುಲ್‌ ಗಾಂಧಿ ಅವರು ರಾಯ್‌ಬರೇಲಿ ಸಂಸದರಾಗಿ ಮುಂದುವರಿಯಲಿದ್ದಾರೆ. ವಯನಾಡು ಲೋಕಸಭೆ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಪಕ್ಷವು ತೀರ್ಮಾನ ತೆಗೆದುಕೊಂಡಿದೆ ಎಂಬುದಾಗಿ ಖರ್ಗೆ ಮಾಹಿತಿ ನೀಡಿದರು.
ರಾಹುಲ್ ಗಾಂಧಿ ಮಾತನಾಡಿ, ವಯನಾಡಿನ ಜನತೆ ಜತೆ ಕಳೆದ ಐದು ವರ್ಷಗಳಿಂದ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಕಳೆದ ಐದು ವರ್ಷಗಳಿಂದ ವಯನಾಡು ಸಂಸದನಾಗಿದ್ದ ನನಗೆ ಅಲ್ಲಿನ ಜನ ತೋರಿಸಿದ ಪ್ರೀತಿ, ಬೆಂಬಲ ಅಪಾರವಾದುದು. ಈಗ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಲಿದ್ದಾರೆ. ನಾನು ಕೂಡ ವಯನಾಡಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ ಎಂದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಕಡೆಗಳಿಗೆಯಲ್ಲಿ ರಾಹುಲ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು.
ರಾಹುಲ್‌ ಗಾಂಧಿ ಅವರು 2019ರಲ್ಲಿ ಉತ್ತರ ಪ್ರದೇಶ ಅಮೇಥಿ ಹಾಗೂ ವಯನಾಡಿನಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋಲನುಭವಿಸಿದ ಕಾರಣ ಅವರು ವಯನಾಡು ಸಂಸದರಾಗಿ ಮುಂದುವರಿದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು 2004ರಿಂದಲೂ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಯನಾಡು ಹಾಗೂ ರಾಯ್‌ಬರೇಲಿಯಲ್ಲಿ ಗೆಲುವು ಸಾಧಿಸಿದ ಕಾರಣ, ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಉಂಟಾಗಿತ್ತು.