ವಯಕ್ತಿಕ ಸಂಚಾರ ನಿರ್ಬಂಧ: ಬಸ್,ರೈಲು ,ವಿಮಾನ ಸಂಚಾರ ಅಬಾಧಿತ

ಬೆಂಗಳೂರು, ಡಿ.23- ರಾಜ್ಯದಲ್ಲಿ ನಾಳೆ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಗ್ಗೆ 5 ಗಂಟೆತನಕ ರಾತ್ರಿ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಆದರೆ, ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಮಾರ್ಗ‌ಸೂಚಿಯಲ್ಲಿ ತಿಳಿಸಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಎಲ್ಲ ಕೈಗಾರಿಕೆಗಳು, ಕಂಪನಿಗಳು, ಸಂಘಟನೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದಲ್ಲಿ ಶೇಕಡ 50ಕ್ಕೆ ಕಡಿತಗೊಳಿಸಿ, ಉಳಿದವರಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಸಂಸ್ಥೆಯ ಅಗತ್ಯ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅಗತ್ಯವಿರುವ ಕೈಗಾರಿಕೆಗಳು ದಿನದ 24 ಗಂಟೆಯೂ ಯಾವುದೇ ನಿರ್ಬಂಧ ಇಲ್ಲದೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ; ದೂರದ ಪ್ರಯಾಣದ ಬಸ್ ಗಳು, ರೈಲುಗಳು ಮತ್ತು ವಿಮಾನ ಸೇವೆ ಅಬಾಧಿತವಾಗಿರಲಿದೆ ತಿಳಿಸಲಾಗಿದೆ.

ಬಸ್, ರೈಲು, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಕರೆತರಲು ಟ್ಯಾಕ್ಸಿಗಳು, ಆಟೋಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ನಾಳೆ ಮಧ್ಯರಾತ್ರಿ ಕ್ರಿಸ್ ಮಸ್ ಆಚರಣೆ ಇರುವುದರಿಂದ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಹೊಸ ವರ್ಷ ಮತ್ತು ಕ್ರಿಸ್ ಮಸ್ ಆಚರಣೆಯನ್ನು ಅಗತ್ಯ ಮಾರ್ಗಸೂಚಿಗಳೊಂದಿಗೆ ಪಾಲಿಸುವಂತೆಯೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹೊರಡಿಸಿರುವ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಕೇಂದ್ರದ ಸುತ್ತೋಲೆ:

ಈ ಮಧ್ಯೆ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತಾಲಯ ಕೇಂದ್ರದ ಮಾರ್ಗಸೂಚಿ ಅನ್ವಯ  ಸುತ್ತೋಲೆ ಹೊರಡಿಸಿದ್ದು,   ಹೊಸ ಅಲೆಯ ಸೋಂಕು ನಿಯಂತ್ರಣಕ್ಕೆ  ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ,  ಮಂಗಳೂರು- ಕಾರಾವಾರ ಬಂದರು ಪ್ರದೇಶಗಳಲ್ಲಿ ಮಾದರಿ ಕಾರ್ಯಾಚರಣೆ ಪ್ರಕ್ರಿಯೆ – ಎಸ್ ಒಪಿ ಜಾರಿಗೆ ವಿಶೇಷ ಗಮನಹರಿಸಬೇಕು. ಈ ಪ್ರದೇಶಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸೋಂಕು ದೃಢಪಟ್ಟಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ಕ್ರಮ ಜರುಗಿಸಬೇಕು ಎಂದು ಹೇಳಿದೆ.

ಮಾರ್ಗಸೂಚಿ ಬಿಡುಗಡೆ

  • ಬಸ್ ,ರೈಲು, ವಿಮಾನ ಸಂಚಾರ ಅಬಾಧಿತ
  • ಆಟೋ, ಟ್ಯಾಕ್ಸಿ ಗೂ ಅವಕಾಶ
  • ರಾತ್ರಿ ಪಾಳಿಯಲ್ಲಿ ಕೆಲಸ ,ಶೇ.50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
  • ಗುರುತಿನ‌ ಚೀಟಿಯೊಂದಿಗೆ ಪ್ರಯಾಣ
  • ಹೊಸ ಮಾರ್ಗ ಸೂಚಿಯೊಂದಿಗೆ ಕ್ರಿಸ್ ಮಸ್, ಹೊಸ ವರ್ಷಾಚರಣೆ.
  • ವೈಯಕ್ತಿಕ ಸಂಚಾರ ನಿರ್ಬಂಧ