
ಹೈದರಾಬಾದ್,ಸೆ.17-ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳನ್ನು ಬದಿಗಿಟ್ಟು ಪಕ್ಷದ ಯಶಸ್ಸಿಗೆ ಅವಿರತವಾಗಿ ಶ್ರಮಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಎಲ್ಲಾ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಗೆಲುವುವನ್ನು ಉಲ್ಲೇಖಿಸಿದ ಅವರು ಏಕತೆ ಮತ್ತು ಶಿಸ್ತಿನಿಂದ ಮಾತ್ರ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಲು ಸಾಧ್ಯ ಎಂದು ಕಿವಿಮಾತು ಹೇಳಿದ್ದಾರೆ
ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಎರಡನೇ ದಿನದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪಕ್ಷದ ಸದಸ್ಯರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಕೂಡದು. ತಮ್ಮದೇ ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ತಪ್ಪಿಸಿ ಎಂದು ಹೋಗುವುದನ್ನು ತಪ್ಪಿಸಬೇಕೆಂದು ಸಲಹೆ ನೀಡಿದ್ದಾರೆ
ಒಗ್ಗಟ್ಟಿಗೆ ಹೆಚ್ಚಿನ ಒತ್ತು ನೀಡಿ, ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಅವಿರತವಾಗಿ ಕೆಲಸ ಮಾಡಬೇಕು.ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು.ನಾವು ಸ್ವಯಂ ಸಂಯಮದಿಂದ ಇರಬೇಕು ಎಂದು ಹೇಳಿದ್ದಾರೆ.
ಸಂಘಟನಾತ್ಮಕವಾಗಿಯೂ ನಾವು ಇನ್ನಷ್ಟು ಬಲಿಷ್ಠವಾಗಬೇಕು. ಐಕ್ಯತೆ ಅತ್ಯಂತ ಮಹತ್ವದ್ದಾಗಿದೆ.ಒಗ್ಗಟ್ಟು ಮತ್ತು ಶಿಸ್ತಿನ ಮೂಲಕ ಮಾತ್ರ ನಾವು ನಮ್ಮ ವಿರೋಧಿಗಳನ್ನು ಸೋಲಿಸಬಹುದು.ಇದು ಕರ್ನಾಟಕದಲ್ಲಿ ಸ್ಪಷ್ಟವಾಗಿದೆ, ಅಲ್ಲಿ ನಾವು ಒಗ್ಗಟ್ಟಾಗಿ ಉಳಿದು ಯಶಸ್ಸನ್ನು ಸಾಧಿಸಲು ಶಿಸ್ತಿನಿಂದ ಹೋರಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಂದೆ ಸವಾಲುಗಳಿವೆ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ ಅವರು ಈ ಸವಾಲುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಭಾರತೀಯ ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತೀಯ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಸದ್ಯದಲ್ಲಿಯೇ 5 ರಾಜ್ಯಗಳ ಚುನಾವಣೆ
“ಐದು ರಾಜ್ಯಗಳ ಚುನಾವಣೆಯು ಇನ್ನೆರಡು ಮೂರು ತಿಂಗಳಲ್ಲಿ ನಿಗದಿಯಾಗಿದೆ, ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವನೀಯ ವಿಧಾನಸಭಾ ಚುನಾವಣೆಗಳಿಗೆ ನಾವು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಹೊಸ ಮಾದರಿಯ ಪ್ರವರ್ತಕರಾಗಿದ್ದಾರೆ. ನಾವು ಈ ಕಲ್ಯಾಣ ಯೋಜನೆಗಳನ್ನು ದೇಶಾದ್ಯಂತ ಪ್ರಚಾರ ಮಾಡಬೇಕು ಎಂದಿದ್ದಾರೆ.
ರಾಜ್ಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು, ಮಂಡಲ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ನಿಮ್ಮ ಸಮಿತಿಗಳು ಸಿದ್ಧವಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು , ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಪಕ್ಷದ ನಾಯಕರಿಗೆ ಇದು ವಿಶ್ರಾಂತಿಯ ಸಮಯವಲ್ಲ ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಹಲವು ಪಟ್ಟು ಹೆಚ್ಚಾಗಿದೆ. ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಕಾಳಜಿಯನ್ನು ತಿಳಿಸಲು ಪ್ರಧಾನಿ ನಿರಾಕರಿಸುತ್ತಾರೆ; ಬದಲಿಗೆ, ಅವರು ತನ್ನನ್ನು ಮೀರಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ, ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಗ್ಗೂಡಿ ಈ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಬೇಕು. ಜನರು ಪರ್ಯಾಯವನ್ನು ಹುಡುಕುತ್ತಿದ್ದಾರೆ ಮತ್ತು ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಚುನಾವಣೆಗಳಲ್ಲಿನ ನಮ್ಮ ವಿಜಯಗಳು ಇದಕ್ಕೆ ಸ್ಪಷ್ಟ ಸಾಕ್ಷಿ ಎಂದಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಮತ್ತು ದೇಶದಲ್ಲಿ ಪರ್ಯಾಯ ಸರ್ಕಾರ ರಚಿಸಲು ಶ್ರದ್ಧೆಯಿಂದ ಕೆಲಸ ಮಾಡುವುದು ನಮ್ಮ ಗುರಿಯಾಗಬೇಕು, ”ಎಂದು ಅವರು ಹೇಳಿದ್ದಾರೆ.