ವನ್ಯಜೀವಿ ವಲಯ ರಕ್ಷಣೆಗೆ ಮನವೊಲಿಕೆ ಕಾರ್ಯ

೬೨೪ ಕುಟುಂಬಗಳ ಒಪ್ಪಿಗೆ ೭೬೦ ಕುಟುಂಬ ಬಾಕಿ- ಸಚಿವ ಅರವಿಂದ ಲಿಂಬಾವಳಿ

ಪುತ್ತೂರು, ಎ.೨೪- ವನ್ಯಜೀವಿ ವಲಯದಿಂದ ಹೊರ ಬರಲು ಮನವಿ ಕುದುರೆಮುಖ ವನ್ಯಜೀವಿ ವಲಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಮನವೊಲಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ೬೨೪ ಕುಟುಂಬಗಳು ಅರಣ್ಯ ಬಿಟ್ಟು ಹೊರಬರಲು ಒಪ್ಪಿದ್ದಾರೆ. ಇನ್ನೂ ೭೬೦ ಕುಟುಂಬಗಳು ಒಪ್ಪಿಗೆ ನೀಡಲು ಬಾಕಿ ಇದೆ. ಇವರ ಮನವೊಲಿಕೆ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಅರಣ್ಯ ಖಾತೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಪುತ್ತೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಲ್ಲಿಂದ ಹೊರ ಬರುವ ಕುಟುಂಬಗಳಿಗೆ ಉತ್ತಮ ಪರಿಹಾರ, ನಿವೇಶನ ಪ್ಯಾಕೇಜ್ ಇದೆ. ವನ್ಯಧಾಮದಿಂದ ಹೊರ ಬರುವ ಮೂಲಕ ಪ್ರಾಣಿಗಳಿಗೆ ಬದುಕಲು ಬಿಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.

ಆಕ್ಸಿಜನ್ ಕೊರತೆ ನಿಜ

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಪ್ರಮಾಣ ವ್ಯಾಪಕವಾಗಿ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವುದು ನಿಜ. ಆದರೆ ಅದಕ್ಕಾಗಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಚಿವ ಜಗದೀಶ್ ಶೆಟ್ಟರ್ ಈಗಾಗಲೇ ಜಿಂದಾಲ್ ಸೇರಿದಂತೆ ನಾನಾ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಆಕ್ಸಿಜನ್ ಖರೀದಿಸಲು ಕ್ರಮ ಕೈಗೊಂಡಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಇರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸರ್ಕಾರ ತನ್ನ ಇತಿಮಿತಿಯಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಸರ್ಕಾರ ತನ್ನ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪದೇ ಪದೇ ಬದಲಾಯಿಸುವ ಮೂಲಕ ಜನರನ್ನು ಗೊಂದಲ ಮತ್ತು ಆತಂಕಕ್ಕೆ ತಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಕೂಡ ನಮ್ಮನ್ನು ಗೊಂದಲಕ್ಕೆ ದೂಡುತ್ತಿದೆ. ದಿನ ದಿನಕ್ಕೆ ಪ್ರಮಾಣ ಹೆಚ್ಚುತ್ತಿರುವ ಕಾರಣ ಸರಕಾರ ಅನಿವಾರ್ಯವಾಗಿ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾಗಿ ಬಂದಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸರಕಾರದ ಜತೆ ಕೈಜೋಡಿಸಬೇಕು. ಇದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಗತ್ಯ. ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ ಎಂದರು.

ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟ್ ಬಗ್ಗೆ ಮತ್ತೊಮ್ಮೆ ವೈಜ್ಷಾನಿಕವಾಗಿ ಸಮೀಕ್ಷೆ ಮಾಡಿ ಸಮಗ್ರ ವರದಿಯನ್ನು ಸಲ್ಲಿಸಲು ಇಲಾಖೆಗೆ ಸೂಚಿಸಿದ್ದೇನೆ. ಅಂತಿಮ ವರದಿ ಬಂದ ಮೇಲೆ ಅದನ್ನು ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಮೂಲಕ ಸಲ್ಲಿಸಲಾಗುವುದು. ಡೀಮ್ಡ್ ಫಾರೆಸ್ಟ್‌ನಲ್ಲಿ ಎಷ್ಟು ಭಾಗದಲ್ಲಿ ವಸತಿ, ಕೃಷಿ ಇತ್ಯಾದಿ ಇದೆ ಮತ್ತು ಸಾರ್ವಜನಿಕ ವ್ಯವಸ್ಥೆಗಾಗಿ ಎಷ್ಟು ಪ್ರದೇಶ ಬೇಕು ಎಂಬುದನ್ನು ನೋಡಿಕೊಂಡು ಅರಣ್ಯ ವ್ಯಾಪ್ತಿಯಲ್ಲಿ ಎಷ್ಟನ್ನು ಉಳಿಸಿಕೊಳ್ಳಹುದು ಎಂಬದನ್ನು ವರದಿಯಲ್ಲಿ ದಾಖಲಿಸಲಾಗುತ್ತದೆ. ಡೀಮ್ಡ್ ಫಾರೆಸ್ಟ್‌ನಲ್ಲಿ ಎಷ್ಟನ್ನು ಅರಣ್ಯಕ್ಕಾಗಿ ಉಳಿಸಿಕೊಳ್ಳುತ್ತೀರಿ ಎಂದು ನ್ಯಾಯಾಲಯ ಕೇಳಿರುವ ಕಾರಣ ಈ ವರದಿ ಮಹತ್ವದ್ದು ಎಂದು ಸಚಿವರು ಹೇಳಿದರು.

ದ.ಕ., ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಕಾಂಡ್ಲಾ ಪ್ರದೇಶದಲ್ಲಿ ಅರಣ್ಯ ನಶಿಸುತ್ತಿರುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಜತೆ ಮಾತುಕತೆ ನಡೆಸಲಿದ್ದೇವೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಕೆಲವೊಂದು ಬೇಡಿಕೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.