ವನ್ಯಜೀವಿ ಉತ್ಪನ್ನ ಅಪರಾಧ ಪರಿಶೀಲಿಸಿ ಕ್ರಮಕ್ಕೆ ಹಾರನಹಳ್ಳಿ ಆಗ್ರಹ

ಬೆಂಗಳೂರು, ಅ. ೨೮- ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಉತ್ಪನ್ನಗಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಗಳನ್ನು ಬಂಧಿಸಿರುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿ ಈ ವ್ಯಕ್ತಿಗಳು ಅಪರಾಧ ಎಸಗಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಳ್ಳಿ ಹೇಳಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ಈಶ್ವರ್‌ಖಂಡ್ರೆ ಅವರಿಗೆ ಪತ್ರ ಬರೆದಿರುವ ಅಶೋಕ್ ಹಾರನಳ್ಳಿ, ವನ್ಯಜೀವಿಗಳ ಉತ್ಪನ್ನಗಳ್ನು ಎಲ್ಲ ಧರ್ಮೀಯರು ಬಹಳ ವರ್ಷಗಳಿಂದ ಮಠ ಮಂದಿರಗಳಲ್ಲಿ ಉಪಯೋಗಿಸುತ್ತಿದ್ದಾರೆ. ಧಾರ್ಮಿಕ ಶ್ರದ್ಧಾ ಭಕ್ತಿಗಳಿಗೆ ಅನುಗುಣವಾಗಿ ಇದು ರೂಡಿಯಲ್ಲಿದೆ. ಇಂದು ಮಠ-ಮಾನ್ಯಗಳಲ್ಲಿ ಸನ್ಯಾಸಿಗಳು ಅನೇಕ ಶತಮಾನಗಳಿಂದ ಕೃಷ್ಣಾಜೀನವನ್ನು ಉಪಯೋಗಿಸುತ್ತಿರುವುದು ಸರ್ವವಿಧಿತವಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲೂ ನವಿಲುಗರಿಯನ್ನು ಉಪಯೋಗಿಸುವುದು ಬಳಕೆಯಲ್ಲಿದೆ. ಹಾಗಾಗಿ ಯಾರೇ ಆಗಲಿ ಉದ್ದೇಶಪೂರ್ವಕಾಗಿ ಅಪರಾಧ ಎಸಗಿದ್ದಾರೋ ಇಲ್ಲವೋ ಎಂದು ಪರಿಶೀಲಬೇಕಾಗುತ್ತಾದೆ ಎಂದು ಅವರು ಹೇಳಿದ್ದಾರೆ.
ಮೊಕದ್ದಮೆ ದಾಖಲಿಸಬೇಕಾದ ಸಂದರ್ಭ ಉಂಟಾದರೂ ಸಹ ನಾಗರಿಕರನ್ನು ಬಂಧಿಸುವ ಅವಶ್ಯಕತೆ ಇಲ್ಲ. ಏಕೆದಂರೆ ಆ ವ್ಯಕ್ತಿಗಳಿಗೆ ಅಪರಾಧ ಹಿನ್ನೆಲೆ ಇರುವುದಿಲ್ಲ ಹಾಗೂ ತಪ್ಪಿಸಿಕೊಂಡು ಹೋಗುವ ಸಾಧ್ಯತೆಯೂ ಕಡಿಮೆ ಇರುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅನವಶ್ಯಕ ಬಂಧನ ಮಾಡದಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿ ಎಂದು ಅರಣ್ಯ ಸಚಿವರಲ್ಲಿ ಕೋರಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯಾ ಮಾರ್ಕಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚಕರನ್ನು ಹುಲಿ ಉಗುರು ಹೊಂದಿರುವುದರಿಂದ ಬಂಧಿಸಿರುವುದು ಖಂಡನೀಯ. ಈ ಅರ್ಚಕರನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.