ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ:ಸಂತೋಷ ಬಂಡೆ

ವಿಜಯಪುರ:ಮಾ.4: ನಮ್ಮ ನೈಸರ್ಗಿಕ ಪ್ರಪಂಚದ ಸೌಂದರ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿ, ಅವನ್ನು ಸಂರಕ್ಷಿಸಲು ಮಾರ್ಗಗಳನ್ನು ಹುಡುಕುವುದು ಬಹು ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಹೇಳಿದರು.

    ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಶ್ವ ವನ್ಯಜೀವಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
   ಈಗ ಪ್ರಸ್ತುತ ಸುಮಾರು 8000ಕ್ಕೂ ಹೆಚ್ಚು ಪ್ರಭೇದದ ಕಾಡು ಪ್ರಾಣಿಗಳು ಮತ್ತು ಸಸ್ಯಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿದೆ. 30,000ಕ್ಕೂ ಅಧಿಕ ಪ್ರಭೇದಗಳು ಮುಂದಿನ ದಿನಗಳಲ್ಲಿ ಅಳಿವಿನಂಚಿಗೆ ತಲುಪುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.ಈ ನಿಟ್ಟಿನಲ್ಲಿ ನಾವು ಲಕ್ಷಾಂತರ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
     ಶಿಕ್ಷಕ ರಾಘು ಮೊಗಳ ಮಾತನಾಡಿ,ನಾವು ಹೆಚ್ಚು ಸಮರ್ಥನೀಯ ಜೀವನವನ್ನು ನಡೆಸಬೇಕು ಮತ್ತು ಪ್ರಕೃತಿಯನ್ನು ಗೌರವಿಸಲು ಮತ್ತು ಅದರ ವೈವಿಧ್ಯತೆಯನ್ನು ರಕ್ಷಿಸಲು ಕಲಿಯಬೇಕು. ಅಳಿವಿನಂಚಿನಲ್ಲಿರುವ ಎಲ್ಲಾ ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸಲು  ನಾವು ಮುಂದಾಗಬೇಕಿದೆ ಎಂದು ಹೇಳಿದರು.  
    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ,ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರ ಇಂದಿನ ಪೀಳಿಗೆಗೆ ತಿಳಿಹೇಳುವದು ಬಹು ಮುಖ್ಯವಾಗಿದೆ ಎಂದರು.
      ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ,

ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ದೈ ಶಿ ಎಂ ಎಸ್ ಪಾಪನಾಳಮಠ, ಶಿಕ್ಷಕರಾದ ಬಸಮ್ಮ ವಡಗೇರಿ,ಸ್ನೇಹ ಹಕ್ಕಿ, ಮಧುಮತಿ ನಿಕ್ಕಂ,ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳು ವನ್ಯಜೀವಿಗಳ ಸಂರಕ್ಷಣೆ ಕುರಿತು ನಾಮಫಲಕಗಳನ್ನು ಪ್ರದರ್ಶಿಸಿದರು.