ವನ್ಯಜೀವಿಗಳ ಸಂರಕ್ಷಣೆಯ ಜಾಗೃತಿ ಜಾಥಾ

ಸಂಜೆವಾಣಿ ನ್ಯೂಸ್
ಮೈಸೂರು: ಅ.03:- 69ನೇ ವನ್ಯಪ್ರಾಣಿ ಸಪ್ತಾಹದ ಅಂಗವಾಗಿ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ವನ್ಯಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ನೀಡಲಾಗಿದೆ.
ಮಹಾತ ಗಾಂಧಿ ಅವರ ಜನದಿನದಂದು ವನ್ಯಜೀವಿಗಳ ಮಹತ್ವ ಸಾರುವ ಕುರಿತಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೃಗಾಲಯದವರೆಗೆ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು ಭಾಗವಹಿಸಿದ್ದರು.
ಹುಲಿ, ಕರಡಿ, ಆನೆ ಸೇರಿದಂತೆ ಪ್ರಾಣಿ ಪಕ್ಷಿಗಳ ವೇಷಧಾರಿಗಳು ಸಾರ್ವಜನಿಕರ ಗಮನಸೆಳೆದರು. ಕಾಡು ಉಳಿಸಿ ನಾಡು ಬೆಳೆಸಿ, ಕಾಡಿದ್ದರೆ ನಾಡು, ಪ್ಲಾಸ್ಟಿಕ್ ಮುಕ್ತ ಪರಿಸರ, ವನ್ಯಜೀವಿಗಳಿಗೆ ತೊಂದರೆ ಕೊಡಬೇಡಿ, ಅರಣ್ಯ ಸಂರಕ್ಷಣೆ ನಮೆಲ್ಲರ ಹೊಣೆ, ಪ್ರಕೃತಿಯನ್ನು ಕಲುಷಿತ ಮಾಡಬೇಡಿ ಎಂಬಿತ್ಯಾದಿ ಫಲಕಗಳನ್ನು ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಕಾಲ್ನಡಿಗೆಗೆ ಚಾಲನೆ ನೀಡಿದರು. ಬಳಿಕ ಮೃಗಾಲಯದಲ್ಲಿ ಆಯೋಜಿಸಿರುವ ಛಾಯಾಚಿತ್ರವನ್ನು ಪ್ರದರ್ಶನ ಉದ್ಘಾಟಿಸಿ ಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಸ್ವಯಂ ಸೇವಕರು ವನ್ಯಜೀವಿ ಸಂರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆ ವಿಜೇತರ ವಿವರನ್ನು ಪ್ರಕಟಿಸಲಾಗಿದೆ.
ಮೃಗಾಲಯದ ಪ್ರಾಣಿ ಪಕ್ಷಿಗಳ ಚಿತ್ರ ಕ್ಲಿಕ್ಕಿಸಿದ ವಿಭಾಗದಲ್ಲಿ ವರದನಾಯಕ ಟಿ.ಪಿ ಪ್ರಥಮ, ಉಮಾಶಂಕರ್ ಬಿ.ಎನ್ ದ್ವಿತೀಯ, ಶಿವಕುಮಾರ್ ಬಿ ತೃತೀಯ, ಶಶಾಂಕ್ ಎಚ್.ಆರ್., ಮಧುಸೂನ್ ಎಸ್.ಆರ್. ಚಿರಾಗ್ ರಾಜ್ ಮತ್ತು ಸಾಗರ್ ಸುರೇಶ್ ಸಮಾಧಾನ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಮೃಗಾಲಯದಿಂದ ಹೊರಗಡೆ ತೆಗೆದ ವನ್ಯಜೀವಿಗಳ ಛಾಯಾಚಿತ್ರ ವಿಭಾಗದಲ್ಲಿ ಉಮೇಶ್ ಬಿ ಪ್ರಥಮ, ಎಂ.ಎಸ್. ಬಸವಣ್ಣ ದ್ವಿತೀಯ, ಎಂ.ಆರ್.ರೂಪೇಶ್ ತೃತೀಯ, ಗಿರಿಧರ್ ವಿ, ಜಿ.ಎಸ್.ರವಿಶಂಕರ್, ಮಧುಸೂದನ್ ಎಸ್.ಆರ್., ವಿಶ್ರುತ್ ಸಿ ಸಮಾಧಾನಕರ ಬಹುಮಾನಗಳನ್ನು ಪಡೆದಿದ್ದಾರೆ.
ಡಿಸಿಎಫ್ ಸೌರಭ್‍ಕುಮಾರ್, ಡಾ.ಬಸವರಾಜು, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಮಹೇಶ್‍ಕುಮಾರ್, ಸಹಾಯಕ ನಿರ್ದೇಶಕಿ ರೋಷಿಣಿ, ಆರ್‍ಎಫ್‍ಒ, ಡಿಆರ್‍ಎಫ್‍ಒ, ಗಾರ್ಡ್ ಉಪಸ್ಥಿತರಿದ್ದರು.