
ಕಲಬುರಗಿ,ಸೆ.13-ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲವಾರ ಹೋಬಳಿಯ ರಾಂಪೂರಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡಿ ಅವುಗಳ ಟ್ರೋಫಿಗಳನ್ನು ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹಣಮಂತ ಹೆಳವರ, ಭೀಮರಾಯ ಹೆಳವರ, ಮಲ್ಲಪ್ಪ ಹೆಳವರ ಎಂಬುವವರನ್ನು ಬಂಧಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ಚಿಪ್ಪು ಹಂದಿಯ ಚಿಪ್ಪುಗಳು, ಮುಳ್ಳು ಹಂದಿಯ ಮುಳ್ಳುಗಳು, ಮುಂಗುಸಿಯ ಕೂದಲು, ನೀರು ನಾಯಿ ಚರ್ಮ ಮತ್ತು ಕಾಡು ಹಂದಿಯ ಕೊರೆಗಳು (ದಂತ) ಜಪ್ತಿ ಮಾಡಿದ್ದಾರೆ.
ಅಲ್ಲದೆ ಬೇಟೆಗೆ ಬಳಸಿದ ಭರ್ಚಿ, ಉರುಳು ಹಾಕಲು ಬಳಸುವ ಕ್ಲಚ್ ವೈರ್ ತಂತಿಗಳು, ಹಾರ್ನ್ ಸಮೇತ ಇರುವ ಶಿಖಾರಿ ಬ್ಯಾಟರಿ ಟಾರ್ಚ್, ಚೂರಿ, ಪಂಜಾ, ಮೀನು ಹಿಡಿಯುವ ಬಲೆಗಳು, ಕಬ್ಬಿಣದ ರಾಡುಗಳು, ಮೂರು ಮೊಬೈಲ್‍ಗಳು ಮತ್ತು ಎರಡು ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ.
ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತಕುಮಾರ ಸುಭಾಷರಾವ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮುನೀರ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಿಜಯಕುಮಾರ, ಉಪ ವಲಯ ಅರಣ್ಯಾಧಿಕಾರಿ ಗಜಾನಂದ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕುಂಬಾರಳ್ಳಿಯ ಸಾಯಿಬಣ್ಣ ಹೆಳವರ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧಕಾರ್ಯ ನಡೆದಿದೆ.
ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡುವ, ಮಾರಾಟ ಮಾಡುವ ಅಪರಾಧ ಕೃತ್ಯ ಕಂಡು ಬಂದಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗ ಕಚೇರಿಯ ದೂರವಾಣಿ ಸಂಖ್ಯೆ; 08472-256601 ಗೆ ಕರೆ ಮಾಡಿ ತಿಳಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.