ವನ್ಯಜೀವಿಗಳ ಉಳಿವಿಗಾಗಿ ಎಲ್ಲರೂ ಶ್ರಮಿಸೋಣ

ಕಲಬುರಗಿ:ಡಿ.4: ಪರಿಸರದ ಜೈವಿಕ ವ್ಯವಸ್ಥೆಯ ಸರಪಣಿಯಲ್ಲಿ ಒಂದು ಯಾವುದೇ ಜೀವಿಯ ಸಂತತಿ ನಾಶವಾದರೆ ಅದರ ನೇರ ಪರಿಣಾಮದ ಪರಿಸರದ ಮೇಲಾಗಿ, ಅಸಮತೋಲನೆಯಾಗುತ್ತದೆ. ಆದ್ದರಿಂದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ವನ್ಯ ಜೀವಿಗಳ ಸಂರಕ್ಷಣೆಗೆ ಎಲ್ಲರೂ ಶ್ರಮಿಸೋಣ. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ ಉಪ ವಲಯ ಅರಣ್ಯಾಧಿಕಾರಿ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‍ನಲ್ಲಿರುವ ‘ಬಸವೇಶ್ವರ ಮತ್ತು ಅಕ್ಕ ಮಹಾದೇವಿ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ವನ್ಯಜೀವಿ ಸಂರಕ್ಷಣಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವನ್ಯಜೀವಿಗಳು ಜೀವ ವೈವಿಧ್ಯತೆಯನ್ನು ಕಾಪಾಡುತ್ತವೆ. ಜೀವಿಗಳ ನಾಶಗಳನ್ನು ತಡೆಗಟ್ಟುತ್ತವೆ. ಪ್ರವಾಸೋದ್ಯಮದ ಮೂಲಕ ಆರ್ಥಿಕ ಬೆಳವಣಿಗೆಯಾಗುತ್ತದೆ. ವನೀಕರಣಕ್ಕೆ ಉತ್ತೇಜನಕಾರಿಯಾಗಿವೆ. ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವುನಂಚಿನಲ್ಲಿವೆ. ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ರಕ್ಷಣೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಅಧ್ಯಕ್ಷ ಡಾ.ಅಂಬಾರಾಯ ಎಸ್.ಹಾಗರಗಿ, ಕಾಲೇಜಿನ ಪ್ರಾಂಶುಪಾಲ ನಾಗೇಶ್ ತಿಮಾಜಿ ಬೆಳಮಗಿ, ಉಪನ್ಯಾಸಕರಾದ ಶ್ರೀದೇವಿ ಹಿರೇಮಠ, ಸವಿತಾ ವೀರಶೆಟ್ಟಿ, ಪಾರ್ವತಿ ಕೆ.ಚವ್ಹಾಣ, ಅಂಬಿಕಾ ಯಳಸಂಗಿ, ನಾಗರತ್ನ ಉದೇಶಿ, ಪ್ರಭು ನೀಲಂಕಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.