ವನಮಾರಪಳ್ಳಿ ಚೆಕ್‍ಪೋಸ್ಟ್ ನಲ್ಲಿ ದಾಖಲೆಯಿಲ್ಲದ 141.9 ಕೆಜಿ ಬೆಳ್ಳಿ ಜಪ್ತಿ

ಔರಾದ : ತಾಲ್ಲೂಕಿನ ವನಮಾರಪಳ್ಳಿ ಚೆಕ್‍ಪೋಸ್ಟ್ ಬಳಿ ಗುರುವಾರ ₹1.5 ಕೋಟಿ ಮೌಲ್ಯದ 1.41 ಕ್ವಿಂಟಲ್ ಬೆಳ್ಳಿ ಆಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಕರ್ನಾಟಕದೊಳಗೆ ಕಾರ್‍ ನಲ್ಲಿ ಸಾಗಿಸುತ್ತಿದ್ದ ಇಷ್ಟೊಂದು ದೊಡ್ಡ ಪ್ರಮಾಣದ ಬೆಳ್ಳಿ ಕಾಲುಂಗುರ ಮತ್ತು ಚೈನ್ ಚೆಕ್‍ಪೋಸ್ಟ್ ಸಿಬ್ಬಂದಿ ಜಪ್ತಿ ಮಾಡಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಾರಾಷ್ಟ್ರದ ದೇಗಲೂರ ಕಡೆಯಿಂದ ಬರುತ್ತಿದ್ದ ಕಾರ್ ತಪಾಸಣೆ ವೇಳೆ ಒಟ್ಟು ಎಂಟು ಬ್ಯಾಗ್‍ನಲ್ಲಿ ಬೆಳ್ಳಿ 141.9 ಕೆಜಿ ಬೆಳ್ಳಿ ಆಭರಣಗಳಿರುವುದು ಗೊತ್ತಾಗಿದೆ. ಈ ಸಂಬಂಧ ಕಾರು ಚಾಲಕ ಗಜಾನನ ಹಾಗೂ ಆತನ ಜತೆ ಇದ್ದ ಅನಿಲ ರಮೇಶರಾವ್, ರಾಹುಲ್ ಮಹಾದೇವರಾವ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರು ಮಹಾರಾಷ್ಟ್ರದ ಕಾರಂಜಾ ತಾಲ್ಲೂಕಿನ ಲಾಡ್ ವಾಸಿಂ ಜಿಲ್ಲೆಯರು ಎಂದು ಗೊತ್ತಾಗಿದೆ.

ಚುನಾವಣೆ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಬೆಳ್ಳಿ ಆಭರಣ ಪತ್ತೆಯಾಗಿರುವುದು ಚುನಾವಣೆ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದು ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನ ಎಂದು ಶಂಕಿಸಿ ಬಂಧಿತರನ್ನು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.