ವನಮಹೋತ್ಸವ ಮೂಲಕ ಪರಿಸರ ರಕ್ಷಣೆ

ಅರಸೀಕೆರೆ, ಜು. ೧೨- ಮನುಷ್ಯ ತನ್ನ ಪ್ರಕೃತಿಯಲ್ಲಿನ ಸಸ್ಯ ಸಂಪತ್ತನ್ನು ನಾಶ ಮಾಡುತ್ತಿರುವ ಕಾರಣ ಮುಂದಿನ ಪೀಳಿಗೆ ಸಂಕಷ್ಟಗಳನ್ನು ಅನುಭವಿಸಬಾರದು ಎನ್ನುವ ಉದ್ದೇಶದಿಂದ ವನಮಹೋತ್ಸವ ಸಪ್ತಾಹ ಆಚರಣೆ ಮಾಡುವ ಮೂಲಕ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಬಿ.ಎನ್. ಅಮರನಾಥ್ ಹೇಳಿದರು.
ನಗರದ ಹೊರವಲಯದ ಯಾದಾಪುರ ರಸ್ತೆಯಲ್ಲಿರುವ ತರಳುಬಾಳು ಅನುಭವ ಮಂಟಪ ಕಾಲೇಜು ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಗಾಳಿ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಪರಿಶುದ್ಧ ಗಾಳಿ ಮತ್ತು ನೀರು ಬೇಕಾಗಿರುವ ಕಾರಣ ಪರಿಸರ ಸಂರಕ್ಷಣೆ ಆತನ ಆದ್ಯ ಕರ್ತವ್ಯವಾಗಬೇಕು ಎಂದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ಗಿಡ ಮರ ಬೆಳೆಸಿ ಪರಿಸರ ಸಂರಕ್ಷಿಸಿ ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ ಇದು ಪ್ರತಿನಿತ್ಯದ ಕಾರ್ಯಕ್ರಮವಾಗಬೇಕಾಗಿದೆ. ಅರಣ್ಯ ಇಲಾಖೆ ಮೂಲಕ ಉಚಿತವಾಗಿ ನೀಡುವ ಸಸಿಗಳನ್ನು ವಿದ್ಯಾರ್ಥಿಗಳು ಪಡೆದು ತಮ್ಮ ಶಾಲಾ ಆವರಣ ಮತ್ತು ಗ್ರಾಮಗಳಲ್ಲಿ ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೊಂದು ಮರ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಡಿವೈಎಸ್ಪಿ ಡಿ. ಅಶೋಕ್ ಮಾತನಾಡಿ, ಅರಣ್ಯನಾಶದಿಂದಾಗಿ ಪ್ರಕೃತಿ ವಿಕೋಪಗಳು ಹೆಚ್ಚಾಗಿವೆ. ಮಳೆ ಬೆಳೆಯಿಲ್ಲದೆ ಸಂಕಷ್ಟ ಅನುಭವಿಸಿವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆ ಕುರಿತು ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹೆಚ್ಚೆಚ್ಚು ಮರಗಿಡ ಬೆಳೆಸುವಂತಹ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ವಹಿಸಿದ್ದರು. ಗ್ರೇಡ್-೨ ತಹಶೀಲ್ದಾರ್ ಪಾಲಾಕ್ಷ, ಪರಿಸರ ಪ್ರೇಮಿ ಅಣ್ಣ ನಾಯಕನಹಳ್ಳಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.