ವನಮಹೋತ್ಸವಕ್ಕೆ ಸಾಲುಮರದ ತಿಮ್ಮಕ್ಕ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.03: ತೋರಣಗಲ್ಲು ಸಮೀಪದ ಬೂದಿಗುಡ್ಡದ ಬಳಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಅರಣ್ಯ ಇಲಾಖೆ, ಜಿಂದಾಲ್ ಕಾರ್ಖಾನೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪದ್ಮಶ್ರೀ ಪುರಸ್ಕೃತರಾದ ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕನವರು, ನಾವು ಪರಿಸರದ ಬಗ್ಗೆ ಚರ್ಚಿಸಿ ನಮ್ಮ ಗ್ರಾಮದ ರಸ್ತೆಯ ಎರಡು ಬದಿಯಲ್ಲಿ ಗಿಡಗಳನ್ನು ನೆಟ್ಟೆವು. ಆದರೆ, ಆ ಸಸಿಗಳಿಗೆ ನೀರು ಹಾಕುವುದು ಸಮಸ್ಯೆ ಆಗಿತ್ತು. ಪಕ್ಕದ ಹೊಸಹಳ್ಳಿ ಗ್ರಾಮಕ್ಕೆ ತೆರಳಿ ನೀರಿಗಾಗಿ ಕುಂಬಾರರಿಂದ ಮಣ್ಣಿನ ಬಿಂದಿಗೆಗಳನ್ನು ಖರೀದಿಸಿ 4 ಕೀ.ಮೀ. ದೂರದಿಂದ ಮಣ್ಣಿನ ಬಿಂದಿಗಳ ಮೂಲಕ ನೀರನ್ನು ತಂದು ಸಸಿಗಳಿಗೆ ಹಾಕುತ್ತಿದ್ದವು. ಈ ರೀತಿ ಬೆಳೆಸಿದ ಮರಗಳು ಹೆಮ್ಮರವಾಗಿ ಬೆಳೆದಿದೆ ಎಂದರು.
ಜಿಲ್ಲೆಯಲ್ಲಿ 40 ಹೆಕ್ಟೇರ್ ಅರಣ್ಯಭೂಮಿ ಇದೆ. ಬಳ್ಳಾರಿ ನಗರದಲ್ಲಿ 60 ಸಾವಿರ ಸಸಿಗಳನ್ನು ನೆಟ್ಟು ನಿರಂತರವಾಗಿ ಘೋಷಣೆ ಮಾಡಿರುವುದರಿಂದ ಪ್ರಸ್ತುತ ದಿನಗಳಲ್ಲಿ ಬೇಸಿಗೆಯಲ್ಲಿ ಉಷ್ಠಾಂಶ ಕಡಿಮೆಯಾಗಿದೆ. ಮಣ್ಣಿನ ಸಂರಕ್ಷಣೆ ಅಂತರ್ಜಲದ ಬಗ್ಗೆ ನಮ್ಮ ಅರಣ್ಯ ಇಲಾಖೆಯಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಹೇಳಿದರು.
‘ಪ್ರತಿಯೊಬ್ಬರು ವರ್ಷಕ್ಕೆ ಒಂದು ಸಸಿ ಕಡ್ಡಾಯವಾಗಿ ನೆ‌ಡಬೇಕು. ದರೋಜಿ, ಗುಡೇಕೋಟೆ ಕರಡಿ ಧಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಜಿಂದಾಲ್ ಕಾರ್ಖಾನೆಯ ಅಧ್ಯಕ್ಷ ಪಿ.ಕೆ.ಮುರುಗನ್ ಮಾತನಾಡಿ, ಅಮೃತ ಮಹೋತ್ಸವದ ಅಂಗವಾಗಿ ಜಿಂದಾಲ್ ಕಾರ್ಖಾನೆಯಿಂದ 16 ಸಾವಿರ ಸಸ್ಯಗಳನ್ನು ನೆಡಲಾಗಿದೆ ಎಂದರು.
ಸಾಲುಮರದ ತಿಮ್ಮಕ್ಕ ಅವರು ಬೇವಿನ ಸಸಿಯನ್ನು ನೆಟ್ಟರು. ಜಿಂದಾಲ್ ಮುಖ್ಯ ನಿರ್ವಹಣಾಧಿಕಾರಿ ಎಲ್.ಆರ್.ಸಿಂಗ್, ಉಪಾಧ್ಯಕ್ಷರಾದ ವಿಜಯ ಸಿನ್ನ, ಮಂಜುನಾಥ ಪ್ರಭು ಇದ್ದರು.